ಮೊನ್ನೆ ಅದ್ಯಾರೋ ಒಬ್ಬ ಕಲಾಸಿಪಾಳ್ಯದ ರಸ್ತೆಯೊಂದರಲ್ಲಿ ಅರೆಬೆತ್ತಲಾಗಿ ಓಡುತ್ತಿದ್ದ. ಸುತ್ತಲೂ ಜಗಮಗಿಸುವ ಬೆಳಕು. ಕಣ್ಣು ಕುಕ್ಕುವ ಕ್ಯಾಮರಾ ಫ್ಲಾಶ್. ವಿಪರೀತ ಜನ ಸಂದಣಿ. ಇದೇನಪ್ಪ ಕಥೆ. ಏನಾಗ್ತಿದೆ ಅಲ್ಲಿ ಅಂತ ಅಂದುಕೊಂಡು ಹೋದರೆ, ಅರೆ, ನಮ್ಮ ಡೆಡ್ಲಿ ಸೋಮ!
ಹೌದು. ಡೆಡ್ಲಿ ಸೋಮ ಅರೆಬೆತ್ತಲಾಗಿ ಓಡುತ್ತಿದ್ದರೆ, ಜನ ಹೋ ಎಂದು ಕೂಗುತ್ತಿದ್ದರು. ಸಿಳ್ಳೆ ಹೊಡೆಯುತ್ತಿದ್ದರು. ಅಲ್ಲಾ ನಟ ಆದಿತ್ಯ ಅರೆಬೆತ್ತಲಾಗಿ ಓಡುತ್ತಿದ್ದರೆ ಜನ ಏಕೆ ಸಿಳ್ಳೆ ಹೊಡೆಯುತ್ತಾರೆ ಎಂದು ಪಕ್ಕದವರನ್ನು ವಿಚಾರಿಸಿದರೆ ಅದು ಡೆಡ್ಲಿ ಸೋಮ-2ರ ಶೂಟಿಂಗ್ ಅಂತೆ.
ಚಿತ್ರವನ್ನು ಎಂ. ಮಂಜುನಾಥ್ ನಿರ್ಮಿಸುತ್ತಿದ್ದಾರೆ. ಆದಿತ್ಯ ನಾಯಕನಾಗಿರುವ ಈ ಚಿತ್ರಕ್ಕೆ ರವಿ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಛೇಸಿಂಗ್ ದೃಶ್ಯವೊಂದರಲ್ಲಿ ಅಭಿನಯಿಸುವಾಗ ಏಟು ಬಿದ್ದು, ಎರಡು ತಿಂಗಳು ರೆಸ್ಟ್ ಮಾಡಿ ಬಂದಿರುವ ಆದಿತ್ಯ, ಸಾಕಷ್ಟು ಲವಲವಿಕೆಯಿಂದ ಚಿತ್ರ ಅಭಿನಯದಲ್ಲಿ ತೊಡಗಿದ್ದರು. ಚಿತ್ರ ನೈಜವಾಗಿ ಮೂಡಿಬರಲೆಂದು ಸಾಕಷ್ಟು ಸಾಹಸ ಸಹ ಪಡುತ್ತಿದ್ದಾರೆ. ಚಿತ್ರದ ಚಿತ್ರೀಕರಣದ ಮಾತಿನ ಭಾಗ ಮುಕ್ತಾಯವಾಗಿದೆ. ಇನ್ನು 2 ಹಾಡುಗಳ ಚಿತ್ರಣ ಮಾತ್ರ ಉಳಿದಿದೆ.
ನಟಿ ಸುಹಾಸಿನಿ ಪ್ರಮುಖ ಪಾತ್ರ ನಿರ್ವಹಿಸಿದ್ದು, ನಾಯಕಿ ಪಾತ್ರದಲ್ಲಿ ಮೇಘನಾ ಇದ್ದಾರೆ. ದೇವರಾಜ್, ಅವಿನಾಶ್ ಉಳಿದ ತಾರಾಗಣದಲ್ಲಿದ್ದಾರೆ.ಮ್ಯಾಥ್ಯೂರಾಜನ್ ಛಾಯಾಗ್ರಹಣ, ಸುಷ್ಮಾವೀರ್ ಸಹ ನಿರ್ದೇಶನ, ಜೋನಿ ಹರ್ಷ ಸಂಕಲನ ಈ ಚಿತ್ರಕ್ಕಿದೆ. ಸದ್ಯವೇ ತೆರೆ ಕಾಣಲಿದೆ.