ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದ್ದ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ನಿರೀಕ್ಷೆಯಂತೆ ಸಿನಿಮಾ ವಿತರಕ ಬಸಂತ್ ಕುಮಾರ್ ಪಾಟೀಲ್ ಅವರಿಗೆ ಒಲಿದಿದ್ದು, ಉಪಾಧ್ಯಕ್ಷರಾಗಿ ಬಿ.ಎನ್.ಗಂಗಾಧರ್ ಆಯ್ಕೆಯಾಗಿದ್ದಾರೆ.
ಹಾಲಿ ಅಧ್ಯಕ್ಷೆಯಾಗಿದ್ದ ಜಯಮಾಲಾ ಅವರ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ, ಶನಿವಾರ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಪದಾಧಿಕಾರಿಗಳ ಸ್ಥಾನಕ್ಕೆ ಮತದಾನ ನಡೆದಿತ್ತು. ಆ ನಿಟ್ಟಿನಲ್ಲಿ ವಾಣಿಜ್ಯ ಮಂಡಳಿ ಸಮೀಪದಲ್ಲಿ ಇರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ನಿರ್ಮಾಪಕರು, ಪ್ರದರ್ಶಕರು ಹಾಗೂ ವಿತರಕರು ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ಸಂಜೆ 5ಗಂಟೆಗೆ ಮತದಾನ ಮುಕ್ತಾಯವಾಗಿದ್ದು, ಶೇ.70ರಷ್ಟು ಮತದಾನವಾಗಿತ್ತು. ಬಳಿಕವೇ ಫಲಿತಾಂಶ ಘೋಷಣೆಯಾಗಿತ್ತು.
ಮಂಡಳಿಯ ಅಧ್ಯಕ್ಷ ಸ್ಥಾನಕ್ಕಾಗಿ ಈ ಬಾರಿ ಬಸಂತ ಕುಮಾರ್ ಪಾಟೀಲ್ ಮತ್ತು ವಿಜಯ್ ಕುಮಾರ್ ಹಾಗೂ ಜಾನಕೀರಾಮ್ ನಡುವೆ ತೀವ್ರ ಪೈಪೋಟಿ ನಡೆದಿತ್ತು. ಅಂತೂ ಬಸಂತ್ ಕುಮಾರ್ ಪಾಟೀಲ್ ಅವರ ಕೊರಳಿಗೆ ವಿಜಯಮಾಲೆ ಬಿದ್ದಿದೆ.
ಫಿಲಂ ಚೇಂಬರ್ ಪದಾಧಿಕಾರಿಗಳ ಚುನಾವಣೆಯಲ್ಲಿ ನಿರ್ಮಾಪಕರ ವಲಯದಿಂದ 10 ಮಂದಿ ನೂತನ ಸದಸ್ಯರು ಆಯ್ಕೆಯಾಗಿದ್ದಾರೆ. ಸಾ.ರಾ.ಗೋವಿಂದು, ಉಮೇಶ್ ಬಣಕಾರ್, ಜಯಶ್ರೀದೇವಿ, ದಿನೇಶ್ ಗಾಂಧಿ, ಬಿ.ಎಲ್.ನಾಗರಾಜ್, ಡಿ.ಕೆ.ರಾಮಕೃಷ್ಣ, ಜೆ.ಜೆ.ಕೃಷ್ಣ, ಆರ್.ಎಸ್.ಗೌಡ ಹಾಗೂ ಎನ್.ಎಂ.ಸುರೇಶ್ ಗೆಲುವು ಸಾಧಿಸಿದ್ದಾರೆ.
ಇನ್ನುಳಿದಂತೆ ಮಂಡಳಿಯ ಖಚಾಂಚಿಯಾಗಿ ಚಿನ್ನೇಗೌಡ ಅವಿರೋಧವಾಗಿ ನೇಮಕಗೊಂಡಿದ್ದಾರೆ. ರೆಕಾರ್ಡಿಂಗ್ ಸ್ಟುಡಿಯೋಗೆ ಕರಿಸುಬ್ಬು ಆಯ್ಕೆಗೊಂಡಿದ್ದಾರೆ. ಪ್ರದರ್ಶಕರ ವಲಯದ ಉಪಾಧ್ಯಕ್ಷರಾಗಿ ಎಚ್.ಕೆ.ಅನಂತಮೂರ್ತಿ, ಗೌರವ ಕಾರ್ಯದರ್ಶಿಯಾಗಿ ಗಣೇಶ್ ಹಾಗೂ ವಿತರಕರ ವಲಯದಿಂದ ಕೆ.ಮಂಜು ಆಯ್ಕೆಯಾಗಿದ್ದಾರೆ.