ಆ ದಿನಗಳು ಚಿತ್ರದ ಅದ್ಬುತ ಅಭಿನಯಕ್ಕೆ, ಬಿರುಗಾಳಿಯ ಚೆಂದಕ್ಕೆ ಹಾಗೂ ಸೂರ್ಯಕಾಂತಿಯ ಹೊಡೆದಾಟ ಕಂಡ ಮೇಲೆ ಅದ್ಯಾರೇ ಆದರೂ ನಮ್ಮ ಚೇತನ್ ಸೊಗಸಿಗೆ ಮಾರುಹೋಗಲೇ ಬೇಕು. ಆದರೆ ಅದ್ಯಾಕೋ ಏನೋ, ನಿರೀಕ್ಷಿಸಿದ ಯಶಸ್ಸು ಮಾತ್ರ ಈವರೆಗೆ ಚೇತನ್‌ಗೆ ದಕ್ಕಿಯೇ ಇಲ್ಲ.
ಸೂರ್ಯಕಾಂತಿ ನಂತರ ಕೆಲದಿನ ಕಣ್ಮರೆಯಾಗಿದ್ದ ಈ ಅಪ್ರತಿಮ ಪ್ರತಿಭೆ ಇದೀಗ ಮತ್ತೆ ಚಿತ್ರವೊಂದರಲ್ಲಿ ಮಿಂಚಲಿದೆ. ನೀಳಕಾಯ, ಉತ್ತಮ ಕಂಠದಿಂದ ಪ್ರೇಕ್ಷಕರಲ್ಲಿ ಹುಚ್ಚು ಹತ್ತಿಸಿರುವ ಈ ನಟ ಇದೀಗ ಹೊಸದೊಂದು ಚಿತ್ರದ ಮೂಲಕ ತಮ್ಮ ಪ್ರತಿಭೆಯನ್ನು ಮತ್ತೆ ಸಾಬೀತು ಪಡಿಸಲು ಹೊರಟಿದ್ದಾರೆ. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಶರತ್ ಕದ್ರಿ ಎಂಬುವರು ಚಿತ್ರದ ನಿರ್ದೇಶಕರು. ಶರತ್ ಈಗಾಗಲೇ ಕೆಲ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ ಅನುಭವ ಹೊಂದಿದ್ದಾರೆ. ಸುರಭಿ ಟಾಕೀಸ್ ಅಡಿ ಈ ಚಿತ್ರ ನಿರ್ಮಾಣಗೊಳ್ಳುತ್ತಿದೆ.
ಚಿತ್ರದ ಇನ್ನೊಂದು ವಿಶೇಷ ಅಂದರೆ ಚೇತನ್ ಅವರೇ ಈ ಚಿತ್ರದ ಕಥೆಗಾರರು. ಈ ಚಿತ್ರದಲ್ಲಿ ಚೇತನ್ ಒಬ್ಬ ಆರ್ಕಿಟೆಕ್ಟ್ ಅಂತೆ. ಚಿತ್ರದ ಮೊದಲ ಅರ್ಧಭಾಗ ಇವರು ಲವರ್ ಬಾಯ್ ಆಗಿ ಮಿಂಚಲಿದ್ದಾರೆ. ನಂತರದ ಭಾಗದಲ್ಲಿ ಸಮಾಜದ ಒಬ್ಬ ಯಶಸ್ವಿ ಪುರುಷನ ಪಾತ್ರ ನಿರ್ವಹಿಸಲಿದ್ದಾರೆ. ಒಬ್ಬ ಬುದ್ದಿವಂತ ವ್ಯಕ್ತಿ ಹೇಗಿರುತ್ತಾನೆ ಎಂಬುದನ್ನು ಈ ಚಿತ್ರ ಮನದಟ್ಟು ಮಾಡಿಕೊಡಲಿದೆ ಎಂಬುದು ಚಿಕ್ಕ ಸಾರಾಂಶ.
ಚಿತ್ರಕ್ಕೆ ಅರ್ಜುನ್ ಸಂಗೀತ ಇದೆ. ಬೆಂಗಳೂರು, ಚಿಕ್ಕಮಗಳೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಒಟ್ಟಾರೆ ಚೇತನ್ ಒಂದು ವಿಭಿನ್ನ ಪಾತ್ರದ ಮೂಲಕ ಜನರ ಮುಂದೆ ಬರುತ್ತಿದ್ದಾರೆ. ಆಲ್ ದಿ ಬೆಸ್ಟ್ ಚೇತನ್.