ಇದುವರೆಗೂ ಕಾದಂಬರಿ ಚಿತ್ರವಾಗಿದ್ದನ್ನು ಕಂಡಿದ್ದೆವು. ಈಗ ನಾಟಕವೊಂದು ಚಿತ್ರವಾಗುತ್ತಿದೆ. ಹೌದು, ಚಿಂದೋಡಿ ಭಂಗಾರೇಜ್ ಶಂಭೋ ಶಂಕರ ನಾಟಕವನ್ನು ಸಿನಿಮಾವಾಗಿ ಪರಿವರ್ತಿಸಿ ನಿರ್ದೇಶಿಸುತ್ತಿದ್ದಾರೆ. ನಾಟಕವಾಗಿ ಬಹು ಜನಪ್ರಿಯಗೊಂಡಿರುವ ಈ ಚಿತ್ರ ನಿಜಕ್ಕೂ ಹೆಚ್ಚಿನ ಅಭಿಮಾನಿಗಳನ್ನು ಇಲ್ಲಿ ಸಂಗ್ರಹಿಸಲಿದೆ ಎಂಬುದು ಭಂಗಾರೇಶ್ ಆಶಯ. ಚಿತ್ರಕ್ಕೆ ಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಡಿಟಿಎಸ್ ಅಳವಡಿಸಲಾಗಿದೆ. ನೋಡುಗರಿಗೆ ಈ ಚಿತ್ರ ನಗೆಯ ರಸದೌತಣ ನೀಡಲಿದೆ. ಹೆಸರು ಕೇಳಿ ಇದೊಂದು ಗಂಭೀರ ಚಿತ್ರ ಅಂದುಕೊಂಡರೆ ಅದು ತಪ್ಪು, ಹೊಟ್ಟೆ ಹುಣ್ಣಾಗುವಷ್ಟು ನಗಲು ಚಿತ್ರ ಮೋಸ ಮಾಡುವುದಿಲ್ಲ ಎನ್ನುತ್ತಾರೆ ಭಂಗಾರೇಶ್.
ಚಿಂದೋಡಿ ಶ್ರೀಕಂಠೇಶ್ ಚಿತ್ರದ ನಿರ್ಮಾಪಕರು. ಸಿ.ವಿ. ಶಿವಶಂಕರ್, ಹಂಸಲೇಖ, ಎಸ್. ಮೋಹನ್ ಮತ್ತು ಚಿಂದೋಡಿ ಭಂಗಾರೇಶ್ ರಚಿಸಿದ ಗೀತೆಗಳು ಚಿತ್ರದ ಶ್ರೇಯಸ್ಸನ್ನು ಹೆಚ್ಚಿಸಲಿವೆ. ಎಂ.ಎಸ್. ಮಾರುತಿ ಈ ಗೀತೆಗೆ ಸಂಗೀತ ನೀಡಿದ್ದಾರೆ. ಬಿ.ಎಲ್. ಬಾಬು ಅವರ ಛಾಯಾಗ್ರಹಣ ಚಿತ್ರಕ್ಕೆ ಲಭಿಸಿದೆ. ತಾರಾ ಬಳಗದಲ್ಲಿ ನವೀನ್ ಕೃಷ್ಣ, ಮೋಹನ್, ಚಿಂದೋಡಿ ವಿಜಯ್ ಕುಮಾರ್, ಶ್ರೀನಿವಾಸಮೂರ್ತಿ, ಯಮುನಾ, ಅಶ್ವಿನಿ, ಶ್ರೀಗೌರಿ, ಸಂಜನಾ, ರೂಪಶ್ರೀ ಮತ್ತಿತರರು ಇದ್ದಾರೆ.
ಒಟ್ಟಾರೆ ನಾಟಕವೊಂದು ಚಿತ್ರವಾಗಿ ಬರುತ್ತಿರುವುದು ಇದೇ ಮೊದಲಲ್ಲ. ಆದರೆ ಬಿಡುಗಡೆಯಾದ ಎಲ್ಲಾ ಚಿತ್ರವೂ ಯಶ ಕಂಡಿಲ್ಲ. ಎಲ್ಲೋ ನಾಗಮಂಡಲದಂಥ ಒಂದೆರಡು ಚಿತ್ರಗಳು ಯಶ ಕಂಡಿವೆ. ಇದರಿಂದ ಭಂಗಾರೇಶ್ ಮುಂದೆ ಸಾಕಷ್ಟು ಸವಾಲುಗಳಿವೆ. ನಾಟಕವನ್ನು ನಿರ್ದೇಶಿಸಿದ ಮಾದರಿಯಲ್ಲಿ ಚಿತ್ರ ನಿರ್ದೇಶಿಸಿದರೆ, ಅದನ್ನು ಜನ ಒಪ್ಪುವುದು ಕಷ್ಟ. ಆದ್ದರಿಂದ ಹೊಸತನ ನೀಡುವ ತುಡಿತದ ಜತೆ ವಿಫಲವಾಗದ ರೀತಿಯ ಲೆಕ್ಕಾಚಾರವನ್ನೂ ಇವರು ಮಾಡಬೇಕಿದೆ.