ಹಾಸ್ಯ ಕಲಾವಿದ ಕೋಮಲ್ ಯಾರಿಗೆ ಗೊತ್ತಿಲ್ಲ. ಮೈ ಮನಗಳಲ್ಲಿ ನಗೆಯ ಖಜಾನೆಯನ್ನೇ ತುಂಬಿಕೊಂಡಿರುವ ಈತ ಕನ್ನಡಕ್ಕೆ ಸಿಕ್ಕ ಅಮೂಲ್ಯ ನಗೆರತ್ನ.
ಇವರ ಅಭಿನಯದ ಚಿತ್ರಗಳನ್ನು ನೋಡಿ ಎಲ್ಲರೂ ನಕ್ಕಿರುವುದು ಸಹಜ. ಹಾಸ್ಯನಟರಾಗಿ ಇವರು ಮಾಡಿದ ಸಾಧನೆ ಅಪಾರ. ಅದರಿಂದ ಒಂದು ಹೆಜ್ಜೆ ಮುಂದೆ ಬಂದು ಪೋಷಕ/ನಾಯಕನ ಪಾತ್ರದ ಕೆಲ ಚಿತ್ರಗಳಲ್ಲಿ ಇವರು ಕಾಣಿಸಿಕೊಂಡರು. ಇದರಲ್ಲಿ ಅವರಿಗೆ ಹೀರೋ ಅಂದುಕೊಳ್ಳುವ ಇಮೇಜ್ ಅಷ್ಟಾಗಿ ಸಿಗಲಿಲ್ಲ. ಆದರೆ ಈಗ ಅವರು ನಾಯಕರಾಗಿ ಬಣ್ಣ ಹಚ್ಚುತ್ತಿದ್ದಾರೆ. ಚಿತ್ರವೊಂದರ ಪೂರ್ಣ ಪ್ರಮಾಣದ ನಾಯಕ ಈಗ.
ಹೌದು. ಚಿತ್ರದ ಹೆಸರು ಹಾಗೂ ನಾಯಕನ ಅದೃಷ್ಟ ಎರಡೂ ಈಗ 'ವ್ಹಾರೆ... ವ್ಹಾ...' ಆಗಿದೆ. ಹೌದು ಚಿತ್ರದ ಹೆಸರು ಇದೇ. ಹಾಸ್ಯನಟರಾಗಿದ್ದು ನಾಯಕರ ಇಮೇಜ್ ಹೊಂದಿದವರಿಗೆ ಇಂದು ಇಂಡಸ್ಟ್ತ್ರಿಯಲ್ಲಿ ಬಹಳ ಬೇಡಿಕೆ ಇದೆ. ಇದಕ್ಕೆ ಕೋಮಲ್ ಸದ್ಯಕ್ಕೆ ಸಿಗುವ ಉತ್ತಮ ನಟ. ನಗಿಸುವ ಗುಣ ಹೊಂದಿರುವ ಜತೆ ಕೊಂಚ ಸುಂದರನೂ ಅನ್ನಬಹುದು.
ಚಿತ್ರ ಇದೇ ತಿಂಗಳು 16ಕ್ಕೆ ಸೆಟ್ಟೇರಲಿದೆ. ಬೈಲಹೊಂಗಲ ಸೇರಿದಂತೆ ರಾಜ್ಯದ ನಾನಾ ಕಡೆ ಚಿತ್ರದ ಚಿತ್ರೀಕರಣ ನಡೆಯಲಿದೆ. ಚಿತ್ರದಲ್ಲಿ ಕೋಮಲ್ ಹೊತರುಪಡಿಸಿದರೆ ಉಳಿದೆಲ್ಲಾ ಪಾತ್ರಗಳೂ ಮಹಿಳಾ ಪಾತ್ರಗಳೇ ಎಂಬುದು ವಿಶೇಷ. ಅಲ್ಲದೆ, ಕೋಮಲ್ ಹುಡುಗಿಯರ ಮನಸ್ಸನ್ನು ಅರ್ಥೈಸುವ ಗಂಡಸಿನ ಪಾತ್ರವಂತೆ. ಈ ಪಾತ್ರದಿಂದ ಹೆಣ್ಣು ಮಕ್ಕಳನ್ನು ನನ್ನನ್ನು ಇಷ್ಟಪಡಲು ಆರಂಭಿಸುತ್ತಾರೆ ಎಂಬುದು ಕೋಮಲ್ ಆಶಯ. ಅವರ ಅನಿಸಿಕೆ ಸತ್ಯವಾಗಲಿ ಎಂದು ಹಾರೈಸೋಣ!