ಇಜ್ಜೋಡು ಚಿತ್ರದಲ್ಲಿ ಫೋಟೋ ಜರ್ನಲಿಸ್ಟ್ ಆಗಿ ಕಾಣಿಸಿಕೊಂಡಿದ್ದ ನಟ ಅನಿರುದ್ಧ ಈಗ ನಿರ್ದೇಶನದತ್ತ ಆಸಕ್ತಿ ತೋರುತ್ತಿದ್ದಾರೆ. ಉತ್ತಮ ನಟನಾಗುವ ಕನಸು ಹೊತ್ತು ಚಿತ್ರರಂಗ ಪ್ರವೇಶಿಸಿದ ಇವರಿಗೆ ಸಿಕ್ಕ ಯಶಸ್ಸು ಅಷ್ಟಕ್ಕಷ್ಟೆ. ಇದೀಗ ಇನ್ನೊಂದು ಹೊಸ ಮಾರ್ಗದಲ್ಲಿ ಯಶಸ್ಸು ಕಂಡುಕೊಳ್ಳಲು ಹೊರಟಂತಿದೆ ಅನಿ.
ಇಜ್ಜೋಡು ಕೊಂಚ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಇದೀಗ ಒಂದೆರಡು ಚಿತ್ರ ಅವರ ಕೈಲಿದೆ. ಇದರ ಜತೆ ನಿರ್ದೇಶನವನ್ನೂ ಮಾಡಲು ಮುಂದಾಗಿದ್ದು, ಇವರೀಗ ಸಿಕ್ಕಾಪಟ್ಟೆ ಬ್ಯುಸಿ. ಕೆರೆದುಕೊಳ್ಳಲಿಕ್ಕೂ ಪುರುಸೊತ್ತಿಲ್ಲ. ನೇಮಿಚಂದ್ರ ಕಥೆ ಬರೆದಿರುವ ಚಿತ್ರವೊಂದಕ್ಕೆ ಅನಿರುದ್ಧ ನಿರ್ದೇಶಕರಾಗಿ ಕೆಲಸ ಮಾಡುವುದು ಬಹುತೇಕ ಪಕ್ಕಾ ಆಗಿದೆ. ಹೀಗಾಗಿ ಇನ್ನೊಂದು ಆಯಾಮವನ್ನು ಚಿತ್ರ ಬದುಕಿನಲ್ಲಿ ಇವರು ಕಾಣಲಿದ್ದಾರೆ ಎನ್ನುವುದು ಸುಳ್ಳಲ್ಲ.
ಇದೊಂದು ಸಾಮಾಜಿಕ ಚಿತ್ರವಾಗಿ ಸೆಟ್ಟೇರಲಿದೆ. ಚಿತ್ರದ ನಿರ್ಮಾಪಕರು ಇನ್ನೂ ಪಕ್ಕಾ ಆಗಿಲ್ಲ. ಒಟ್ಟಾರೆ ಇಜ್ಜೋಡು ಯಶಸ್ಸು ಅನಿಗೆ ಖುಶಿ ತಂದಿದ್ದು, ಸಾಹಿತ್ಯ ಕ್ಷೇತ್ರದ ದಿಗ್ಗಜರು ಇವರ ಅಭಿನಯ ಮೆಚ್ಚಿದ್ದು ಸಂತಸ ತಂದಿದೆಯಂತೆ. ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿದೆ ಎಂದು ಹೇಳಲು ಮರೆಯುವುದಿಲ್ಲ.
ಇದೀಗ ನಿರ್ದೇಶನ ಹಾಗೂ ನಟನೆ ಎರಡನ್ನೂ ಉಳಿಸಿಕೊಂಡು, ಬೆಳೆಸಿಕೊಂಡು ಹೋಗುವ ಸವಾಲು ಅನಿ ಮುಂದಿದೆ. ಯಶಸ್ವಿಯಗಿ ನಿಭಾಯಿಸಲಿ ಎಂದು ಹಾರೈಸೋಣ.