ಮೈಸೂರಿನಲ್ಲಿ ಶೂಟಿಂಗ್ ನಡೆಯುವ ವೇಳೆ ಹುಲಿ ಚಿತ್ರ ತಂಡದ ಮೇಲೆ ಕಿಡಿಗೇಡಿಗಳು ಏನೋ ಒಂಥರಾ ನುಗ್ಗಿದ್ದು ನಿಮಗೆಲ್ಲಾ ತಿಳಿಸಿದೆ. ಅಲ್ಲಿ ನಟ ಕಿಶೋರ್ ಚಿತ್ರದಲ್ಲಿನ ಪೊಲೀಸ್ ಖದರನ್ನು ಅಸಲಿ ಆಗಿ ತೋರಿಸಲು ಹೋಗಿ ಅರ್ಧ ಯಶಸ್ಸು ಇನ್ನರ್ಧ ಸೋಲು ಕಂಡದ್ದೂ ಗೊತ್ತಿದೆ. ಏನೋ ಮಾಡಲು ಹೋಗಿ... ಅನ್ನುವ ರೀತಿ ಅಡಕತ್ತರಿಯಲ್ಲಿ ಸಿಕ್ಕಂತಾಗಿತ್ತ ಚಿತ್ರ ತಂಡ. ಹೇಗೋ ಸಂಬಾಳಿಸಿಕೊಂಡು ಚಿತ್ರೀಕರಣ ಮುಗಿಸಿದ ತಂಡ ಈಗ ಬೇರೆ ನಾಲ್ಕಾರು ಕಡೆ ಶೂಟಿಂಗ್ ಕಾರ್ಯ ಪೂರ್ಣಗೊಳಿಸಿದೆ. ಮತ್ತೆಲ್ಲೂ ಕಿರಿಕ್ ಆಗಿಲ್ಲ ಬಿಡಿ.
ಇದೀಗ ಮಾತಿನ ಭಾಗದ ಚಿತ್ರೀಕರಣ ಮುಗಿದು ಹೋಗಿದೆ. ಶಿವು ಎಂಟರ್ಪ್ರೈಸಸ್ ಲಾಂಛನದಲ್ಲಿ ಬಿ.ಎಸ್. ಸುಧೀಂದ್ರ ಹಾಗೂ ಶಿವಪ್ರಕಾಶ್ ನಿರ್ಮಿಸುತ್ತಿರುವ ಈ ಚಿತ್ರದ ಹಾಡಿನ ಚಿತ್ರೀಕರಣ ಮಾತ್ರ ಈಗ ಬಾಕಿ ಇದೆ. ಓಂ ಪ್ರಕಾಶ್ ರಾವ್ ನೇತೃತ್ವದಲ್ಲಿ ಇಡೀ ತಂಡ ಒಂದೇ ಹಂತದಲ್ಲಿ 56 ದಿನ ನಿರಂತರ ಚಿತ್ರೀಕರಣ ನಡೆಸುವ ಮೂಲಕ ಯಶಸ್ವಿಯಾಗಿ ಕಾರ್ಯ ಪೂರೈಸಿದೆ. ಪೋಷಕ ನಟರಾಗಿ ಹೆಸರು ಮಾಡಿದ್ದ ಕಿಶೋರ್ ಈ ಚಿತ್ರದ ನಾಯಕ ಹಾಗೂ ತುಂಡುಡುಗೆ ಸುಂದರಿ ಜೆನ್ನಿಫರ್ ಕೊತ್ವಾಲ್ ನಾಯಕಿ. ಅಭಿಮಾನ್ ರಾಜ್ ಸಂಗೀತವಿದ್ದು, ಮನೋಹರ್ ಛಾಯಾಗ್ರಹಣ ನೀಡಿದ್ದಾರೆ. ತಾರಾಬಳಗದಲ್ಲಿ ಸ್ವಸ್ಥಿಕ್ ಶಂಕರ್, ಆದಿಲೋಕೇಶ್, ಪ್ರೇಮ್, ಶೋಭರಾಜ್, ಶ್ರೀನಿವಾಸಮೂರ್ತಿ, ಅವಿನಾಶ್, ಮಾಳವಿಕಾ, ಸುಮಿತ್ರಾ, ಚಿತ್ರಾ ಶೆಣೈ ಇದ್ದಾರೆ.
ಒಟ್ಟಾರೆ ಸಾಕಷ್ಟು ಏಳು ಬೀಳುಗಳೊಂದಿಗೆ, ಬಡಿದಾಟ ಸೆಣಸಾಟದೊಂದಿಗೆ ಚಿತ್ರ ಸಿದ್ಧವಾಗಿದೆ. ಚಿತ್ರಮಂದಿರದಲ್ಲೂ ನೋಡುಗರು ಮುಗಿ ಬಿದ್ದರೆ ಚಿತ್ರ ಗೆದ್ದಂತೆ, ಇಲ್ಲವಾದರೆ....