ಇದುವರೆಗೂ 360ಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡ ರಾಷ್ಟ್ರಕವಿ ಕುವೆಂಪು ಅವರ ಮಕ್ಕಳ ನಾಟಕ ನನ್ನ ಗೋಪಾಲ ಈಗ ಸಿನಿಮಾವಾಗುತ್ತಿರುವುದನ್ನು ಈಗಾಗಲೇ ಕೇಳಿದ್ದೀರಿ. ಚಿತ್ರ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ರಾಜ್ಯದ ನಾನಾ ಭಾಗದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ವಿಶೇಷವೆಂದರೆ ಚಿತ್ರದಲ್ಲಿ ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಬಣ್ಣ ಹಚ್ಚುತ್ತಿದ್ದಾರೆ.
ಇತ್ತೀಚೆಗೆ ಸಾವನದುರ್ಗ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಸಾಹಿತಿ ದೇ. ಜವರೇಗೌಡರು ಈ ಚಿತ್ರಕ್ಕೆ ಕ್ಲಾಪ್ ಮಾಡಿದ್ದಾರೆ. ಜತೆಗೆ ಒಂದು ಪಾತ್ರವನ್ನೂ ನಿರ್ವಹಿಸುವ ಮೂಲಕ ಚಿತ್ರಕ್ಕೆ ಶುಭಾರಂಭ ನೀಡಿದರು. ಚಿತ್ರದ ಚಿತ್ರೀಕರಣವೂ ಸದ್ಯ ಸಾವನದುರ್ಗದಲ್ಲಿ ಭರದಿಂದ ಸಾಗಿದೆ.
ಸಿ. ಲಕ್ಷ್ಮಣ್ ನಿರ್ದೇಶನದ ಈ ಚಿತ್ರಕ್ಕೆ ಬಸವರಾಜು ಅವರ ಛಾಯಾಗ್ರಹಣ ಇದೆ. ಎಂ.ಎಸ್. ಮಾರುತಿ ಸಂಗೀತವೂ ಇದಕ್ಕಿದೆ. ತಾರಾಬಳಗದಲ್ಲಿ ರಾಜೇಶ್, ಶ್ರುತಿ, ದೊಡ್ಡರಂಗೇಗೌಡ, ವಿಧಾನ ಪರಿಷತ್ ಸದಸ್ಯೆ ಮೋಟಮ್ಮ ಸೇರಿದಂತೆ ಹಲವು ಇದ್ದಾರೆ.
ಒಟ್ಟಾರೆ ಚಿತ್ರ ನೋಡುವ ಆಸಕ್ತಿಯನ್ನು ಎಲ್ಲಾ ವಯೋಮಾನದವರಲ್ಲಿ ಮೂಡಿಸಬೇಕು. ಇವರಲ್ಲೂ ಮುಖ್ಯವಾಗಿ ಮಕ್ಕಳಲ್ಲಿ ಧಾರ್ಮಿಕ ಪ್ರಜ್ನೆ ಜಾಗೃತವಾಗಬೇಕು ಎಂಬ ಉದ್ದೇಶದಿಂದ ಈ ಚಿತ್ರ ಸಿದ್ಧಪಡಿಸಲಾಗುತ್ತಿದೆ. ಮಕ್ಕಳ ಗಮನ ಸೆಳೆಯುವಲ್ಲಿ ಈ ಚಿತ್ರ ಯಶಸ್ವಿ ಆಗಲಿದೆ ಎಂಬುದು ಚಿತ್ರ ತಂಡದ ಒಮ್ಮತದ ಹೇಳಿಕೆ.