ಮದುವೆ ಮನೆ ಸಡಗರ ಊರೆಲ್ಲಾ ಸುತ್ತಿ ಈಗ ಬೆಂಗಳೂರು ಸಮೀಪದ ಜೆಡ್ ಗಾರ್ಡನ್ ತಲುಪಿದೆ. ಗಣೇಶ್ ಅಭಿನಯದ ಈ ಚಿತ್ರ ಇದೀಗ ಸಾಕಷ್ಟು ಸುದ್ದಿ ಮಾಡುತ್ತಿದೆ. ಮದುವೆ ಮನೆಯ ಸಡಗರದ ಸನ್ನಿವೇಶವನ್ನು ಚಿತ್ರೀಕರಿಸಲು ಇಡೀ ಚಿತ್ರ ತಂಡ ಜೇಡ್ ಗಾರ್ಡನ್‌ನಲ್ಲಿ ಸೇರಿತ್ತು. ದುಷ್ಯಂತ ಹಾಗೂ ಸುಮಾರ ವಿವಾಹ ಸಂಭ್ರಮದ ಕ್ಷಣವನ್ನು ಸೆರೆಹಿಡಿಯಲಾಯಿತು.
ಈ ಮದುವೆ ಮನೆಯಲ್ಲಿ ಸ್ನೇಹಿತ ಸೂರಜ್ ಪಾತ್ರ ಬಹು ಮುಖ್ಯವಾದುದು. ಸಡಗರರಿಂದ ಇಡೀ ಮದುವೆ ಮನೆ ಓಡಾಡಿಕೊಂಡು, ಬಂದವರನ್ನೆಲ್ಲಾ ಮಾತನಾಡಿಸುತ್ತಾ, ಕಾಳಜಿ ತೋರುತ್ತಾ, ಮನೆ ಮಗನಂತೆ ಓಡಾಡುತ್ತಿದ್ದ. ಮದುವೆ ಜತೆ ಈತನ ಚಲನವಲನವೂ ಕ್ಯಾಮರಾದಲ್ಲಿ ದಾಖಲಾಗುತ್ತಿತ್ತು. ಮದುವೆ ಮನೆಯಲ್ಲಿ ಈತನಿಗೆ ಎಷ್ಟು ಕೆಲಸ ಅಂದರೆ, ಇದರ ನಡುವೆಯೂ ಸುಮಳನ್ನು ಹಸೆಮಣೆ ಮೇಲೆ ಕೂರಿಸಿ ಬರುವ ವ್ಯಕ್ತಿಯೂ ಈತನೇ. ಏನು ಕ್ಯಾಮರಾ ಬೆಳಕು ಈತನನ್ನು ನುಂಗಿ ಹಾಕುವಂತೆ ಬೆನ್ನತ್ತುತ್ತಿತ್ತು.
ನಿರ್ದೇಶಕ ಸುನಿಲ್ ಕುಮಾರ್ ಸಿಂಗ್ ನೇತೃತ್ವದಲ್ಲಿ ಮದುವೆ ಮನೆ ಚಿತ್ರದ ಶೂಟಿಂಗ್ ನಡೆಯಿತು. ಇದಕ್ಕಾಗಿ ಕಲಾ ನಿರ್ದೇಶಕ ಮೋಹನ್.ಬಿ.ಕೆರೆ ಸೆಟ್ ಹಾಕಿದ್ದರು. ದುಷ್ಯಂತ ಪಾತ್ರದಲ್ಲಿ ಅವಿನಾಶ್ (ಜುಗಾರಿ), ಸುಮಾಳ ಪಾತ್ರದಲ್ಲಿ ಶೃದ್ದಾ ಆರ್ಯ ಹಾಗೂ ಸೂರಜ್ ಪಾತ್ರದಲ್ಲಿ ನಮ್ಮ ಗಣೇಶ್ ಪಾಲ್ಗೊಂಡಿದ್ದರು. ಇಷ್ಟು ಹೇಳಿದ ಮೇಲೆ ಮತ್ತೊಮ್ಮೆ ತ್ಯಾಗರಾಜನಾಗಿ ಪಾತ್ರದಲ್ಲಿ ಗಣೇಶ್ ಮಿಂಚಲಿದ್ದಾರೆ ಎನ್ನುವುದರಲ್ಲಿ ಯಾರಿಗೂ ಸಂಶಯ ಉಳಿಯದು. ಯಾವುದಕ್ಕೂ ಸಂಶಯ ನಿವಾರಣೆಗಾಗಿ ಮದುವೆ ಮನೆ ಬಿಡುಗಡೆಯಾಗುವವರೆಗೂ ಕಾಯಬೇಕು ಬಿಡಿ.