ಮೆರವಣಿಗೆ, ನನ್ನವನು, ಜಂಗ್ಲಿ, ಮನಸಾರೆ, ಧೂಳ್, ನೂರು ಜನ್ಮಕು, ಈಗ ವೀರ ಪರಂಪರೆ, ಇದರ ನಡುವೆಯೇ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸುವ ಮೂಲಕ ಕನ್ನಡದಲ್ಲಿ ಮನೆ ಮಾತಾಗಿರುವ ನಟಿ ಐಂದ್ರಿತಾ ರೇ. ಬಿಡುವಿಲ್ಲದ ಕೆಲಸದ ಒತ್ತಡದ ನಡುವೆ ಸಮಯಕ್ಕೆ ಸರಿಯಾಗಿ ಊಟ ಸಿಗದಿದ್ದರೆ ಇವರು ವಿಪರೀತ ಸಿಟ್ಟಿಗೇಳುತ್ತಾರಂತೆ. ಹೀಗಾಗಿ ಇವರ ಶಕ್ತಿ ಹಾಗೂ ದೌರ್ಬಲ್ಯ ಎರಡೂ ಊಟವೇ ಆಗಿದೆ!
ಮನಸಾರೆ ಚಿತ್ರದ ನಂತರ ಸಾಕಷ್ಟು ಯಶಸ್ಸುಗಳು ಇವರನ್ನು ಹುಡುಕಿ ಬರುತ್ತಿವೆ. ತಮ್ಮ ಗೆಲುವಿಗೆ ಯೋಗರಾಜ್ ಭಟ್ಟರೇ ಕಾರಣ ಎನ್ನುವ ಈಕೆ ಈ ಚಿತ್ರದ ಬಿಡುಗಡೆ ನಂತರ ತಮಗೆ 40 ರಿಂದ 50 ಚಿತ್ರಕ್ಕೆ ಆಫರ್ ಬಂದಿತ್ತು. ಆದರೆ ನಾನು ಸಿಕ್ಕ ಸಿಕ್ಕ ಪಾತ್ರವನ್ನೆಲ್ಲಾ ಒಪ್ಪಿಕೊಳ್ಳಲ್ಲ ಅಂತಾರೆ ಈ ಬಂಗಾಳಿ ಬೆಡಗಿ.
ಮನಸಾರೆ ಚಿತ್ರದಲ್ಲಿ ತಮ್ಮನ್ನು ವಿಭಿನ್ನವಾಗಿ ತೋರಿಸಲಾಗಿದೆ. ಇದರಿಂದ ಇದರ ಅಭಿನಯ ನನಗೆ ಅಚ್ಚುಮೆಚ್ಚು. ನನ್ನನ್ನು ಲಕ್ಕಿ ಗರ್ಲ್ ಅಂತಾರೋ ಇಲ್ಲವೋ ಗೊತ್ತಿಲ್ಲ. ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಯಶಸ್ಸು ಸಿಗುತ್ತಿದೆ ಅಷ್ಟೆ ಎಂದು ಎದೆತಟ್ಟಿ ಹೇಳುತ್ತಾರೆ.
ನನ್ನವನು ಚಿತ್ರದಲ್ಲಿ ನನಗೆ ಸಂಭಾವನೆ ಸರಿಯಾಗಿ ಬರಲಿಲ್ಲ. ಅದಕ್ಕಾಗಿ ಗಲಾಟೆ ಮಾಡಿಕೊಳ್ಳುವುದು ಬೇಡ ಎಂದು ಚಿತ್ರತಂಡದಿಂದ ಹೊರ ಬಂದಿದ್ದೇನೆ. ಚಿತ್ರರಂಗದಲ್ಲಿ ಜಗಳ, ಕಾದಾಟ ಮಾಡಿ ವಿಶ್ವಾಸ ಕಳೆದುಕೊಳ್ಳುವುದು, ಎಲ್ಲರ ದೃಷ್ಟಿಯಲ್ಲಿ ಕೀಳಾಗಿ ಬಿಂಬಿತವಾಗುವುದು ನನಗೆ ಇಷ್ಟವಿಲ್ಲ. ಚಿತ್ರನಟಿಯಾಗಿ ನನ್ನ ಕೆಲಸ ಮಾಡುತ್ತೇನೆ. ಉಳಿದ ಸಮಯ ಫ್ರೆಂಡ್ಸ್ ಜತೆ ಸಿನಿಮಾ ನೋಡ್ತೇನೆ, ಪಾರ್ಟಿ ಅದೂ ಇದು ಅಂತ ಸುತ್ತಾಡ್ತೇನೆ. ಹಾಯಾಗಿ ಕಾಲ ಕಳೆಯುತ್ತೇನೆ ಅಷ್ಟೆ ಎನ್ನುತ್ತಾರೆ.
ಒಟ್ಟಾರೆ ನಿಜ ಜೀವನದಲ್ಲೂ, ಸಿನಿಮಾ ಬದುಕಿನಲ್ಲೂ ಒಂದೇ ರೀತಿ ಇದ್ದೇನೆ. ಯಶಸ್ಸು ಕಂಡಿದ್ದರೆ ಅದಕ್ಕೆ ನನ್ನ ಅಭಿನಯದ ಜೊತೆಗೆ ಈ ನಡವಳಿಕೆಯೂ ಕಾರಣ. ಇದನ್ನು ದುರುಪಯೋಗಪಡಿಸಿಕೊಳ್ಳಲು ನೋಡಿದವರಿಗೆ ತಕ್ಕ ಶಾಸ್ತಿ ಮಾಡುತ್ತೇನೆ ಎನ್ನುವುದನ್ನು ಹೇಳಲು ಮರೆಯುವುದಿಲ್ಲ ಈ ಧೀರೆ ಐಂದ್ರಿತಾ. ಐಂದ್ರಿತಾಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ ಎಂದು ಹಾರೈಸೋಣ.