ಉಪ್ಪಿ ಅಬ್ಬರ ವಿಪರೀತವಾಗಿದೆ. ಇವರ ನಿರ್ದೇಶನ ಹಾಗೂ ಅಭಿನಯದ 'ಸೂಪರ್' ಚಿತ್ರ ತಂಡದಲ್ಲಿ ಇದ್ದವರಿಗಿಂತ ಬಿಟ್ಟು ಹೋಗುತ್ತಿರುವವರೇ ಹೆಚ್ಚು. ಈಗಾಗಲೇ ಸೂಪರ್ ತಂಡದಿಂದ ಸೂಪರ್ ಆಗಿ ಭರ್ಜರಿ 10ಕ್ಕೂ ಹೆಚ್ಚು ಮಂದಿ ಕಾಲ್ಕಿತ್ತಿದ್ದಾರಂತೆ!
ಹೇಗಿದೆ ನೋಡಿ ವಿಪರ್ಯಾಸ. ಚಿತ್ರತಂಡದಿಂದ ಕಥೆ ಮತ್ತು ಚಿತ್ರಕಥೆ ಬರೆಯುವವರು, ಕಾಸ್ಟ್ಯೂಮ್ ಡಿಸೈನರ್, ಕಲಾ ನಿರ್ದೇಶಕ, ಸಂಕಲನಕಾರ, ಸಂಗೀತ ನಿರ್ದೇಶಕ, ಛಾಯಾಗ್ರಾಹಕರ ಜತೆ ಕಾರು ಚಾಲಕನೂ ಕೆಲಸ ಬಿಟ್ಟು ಹೊರಟು ಹೋಗಿದ್ದಾನಂತೆ. ಹೇಗಿದೆ ನೋಡಿ ಉಪ್ಪಿ ಮಾಯೆ...
ಇದಕ್ಕೆಲ್ಲಾ ಉಪ್ಪಿ ಮೂಡ್ ಕಾರಣವಂತೆ. ತಮಗೆ ಮೂಡ್ ಬಂದಾಗ ಶೂಟಿಂಗಿನಲ್ಲಿ ಪಾಲ್ಗೊಳ್ಳುವ ಉಪ್ಪಿ, ಮೂಡ್ ಇಲ್ಲದಿದ್ದರೆ, ಸುಮ್ಮನೆ ಕುಳಿತಿರುತ್ತಾರಂತೆ. ಕೆಲಸ ಇಲ್ಲದೇ ಸುಮ್ಮನೆ ಕೂರುವ ಬದಲು, ಇನ್ನೊಂದು ಕೆಲಸ ನೋಡಿಕೊಂಡರಾಯಿತು ಅಂತ ಇವರೆಲ್ಲಾ ಎದ್ದು ಹೋಗಿದ್ದಾರೆ ಎಂಬ ಗುಲ್ಲು ಗಾಂಧಿನಗರದೆಲ್ಲೆಡೆ ಹಬ್ಬಿದೆ.
ಈಗಾಗಲೇ ಈ ಚಿತ್ರಕ್ಕೆ ಮೂವರು ಛಾಯಾಗ್ರಾಹಕರು ಹಾಗೂ ಮೂವರು ಸಂಗೀತ ನಿರ್ದೇಶಕರು ಬದಲಾಗಿದ್ದಾರಂತೆ. ಚಿತ್ರದಲ್ಲಿ ಅಭಿನಯಿಸುವಂತೆ ನಾನು ನನ್ನ ಕನಸಿನ ಗುಂಗಿನಲ್ಲಿರುವ ಪ್ರಕಾಶ್ ರೈ ಅವರನ್ನು ಉಪ್ಪಿ ಕೇಳಿದ್ದಕ್ಕೆ ಅವರು ತಾನೀಗ ಬ್ಯುಸಿ ಅಂದರಂತೆ. ಮುನಿಸಿಕೊಂಡ ಉಪ್ಪಿ ತೆಲುಗು ನಟರೊಬ್ಬರನ್ನು ಇದಕ್ಕಾಗಿ ಕರೆತಂದಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ. ಚಿತ್ರ ಬಿಡುಗಡೆ ಹೊತ್ತಿಗೆ ಏನಾಗಿರುತ್ತೋ ದೇವರೇ ಬಲ್ಲ.