ರಾಣಿ ಮಹಾರಾಣಿಯರು ಮತ್ತೆ ಬರುತ್ತಿದ್ದಾರೆ. ಇದು 20 ವರ್ಷಗಳ ಹಿಂದೆ ತೆರೆಕಂಡು ಯಶಸ್ವಿಯಾದ ಮಾಲಾಶ್ರೀ ಅವರ ರಾಣಿ ಮಹಾರಾಣಿ ಚಿತ್ರ ಮತ್ತೆ ಬರುತ್ತಿದೆಯೇ ಎಂದು ಹುಬ್ಬೇರಿಸಬೇಡಿ. ಹೌದು ಅಂದರೆ ಹೌದು, ಅಲ್ಲ ಅಂದರೆ ಅಲ್ಲ. ಯಾಕೆಂದರೆ ರಾಣಿ ಮಹಾರಾಣಿ ಹೌದಾದರೂ ಆ ಮೂಲಕ ಬರುತ್ತಿರುವುದು ಮಾಲಾಶ್ರೀ ಅಂತೂ ಖಂಡಿತ ಅಲ್ಲ. ಬದಲಾಗಿ ಈಗಿನ ಬಹುಬೇಡಿಕೆಯ ನಟಿ, ನಮ್ಮ ಮಳೆ ಹುಡುಗಿ ಪೂಜಾ ಗಾಂಧಿ.
ಹೌದು. ಇದು ಪೂಜಾ ಗಾಂಧಿ ಅಭಿನಯದ 'ರಾಣಿ ಮಹಾರಾಣಿ'. ಆದರೆ ಆ ಹಳೆಯ ರಾಣಿಗೂ ಈ ಹೊಸ ರಾಣಿಗೂ ಸಂಬಂಧವಿಲ್ಲ. ಆದರೆ ವಿಶೇಷವೆಂದರೆ, ಮಾಲಾಶ್ರೀ ಥರಾನೇ ಪೂಜಾನೂ ಇಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರ ಮುಂದಿನ ತಿಂಗಳ ಎರಡನೇ ವಾರದಿಂದ ಪ್ರಾರಂಭಗೊಳ್ಳಲಿದೆ.
ಈಗಾಗಲೇ ಎಫ್.ಎಂ. ರೇಡಿಯೋ ಎಂಬ ಚಿತ್ರವನ್ನು ಮುಗಿಸಿರುವ ಬಿ. ರಾಮಮೂರ್ತಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಚಿತ್ರದ ವಿಶೇಷವೆಂದರೆ ನಟ ಸುರೇಶ್ ಚಂದ್ರ ಅವರ ಪುತ್ರ ವಿನಯ್ ಚಂದ್ರ ಈ ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಪರಿಚಯವಾಗುತ್ತಿದ್ದಾರೆ. ಚಿತ್ರಕ್ಕೆ ಶಿಶಿರ ಚಿತ್ರದ ಅಕ್ಷಯ್ ಹಾಗೂ ಜಾಲಿಡೇಸ್ ಚಿತ್ರದ ಪ್ರವೀಣ್ ನಾಯಕರು.