ಗುಬ್ಬಿಯನ್ನು ಹೊರ ತರುವ ಸರ್ವ ರೀತಿಯ ಕೆಲಸವೂ ಸುಸೂತ್ರವಾಗಿ ಮುಗಿದಿದೆ. ಗುಬ್ಬಿ ಹೊರಬಿದ್ದು ಹಾರಾಡುವುದೊಂದೇ ಈಗ ಉಳಿದಿರುವ ಕೆಲಸ. ಅಣಜಿ ನಾಗರಾಜ್ ಅವರು ನಿರ್ಮಿಸುತ್ತಿರುವ ಗುಬ್ಬಿ ಚಿತ್ರಕ್ಕೆ ವಿಜಯ ಕುಮಾರ್ ನಿರ್ದೇಶನ ಲಭಿಸಿದೆ. ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಚಿತ್ರೀಕರಣ ನಂತರ ನಡೆಸಬೇಕಿರುವ ಅಂತಿಮ ಹಂತದ ಕೆಲಸದಲ್ಲಿ ವಿಜಯ್ ತೊಡಗಿದ್ದಾರೆ. ಎಲ್ಲಾ ಸಮಯಕ್ಕೆ ಸರಿಯಾಗಿ ಆಗಿ ಹೋದಲ್ಲಿ ಜೂನ್ ಎರಡು ಅಥವಾ ಮೂರನೇ ವಾರದಲ್ಲಿ ಚಿತ್ರ ಬಿಡುಗಡೆ ಭಾಗ್ಯ ಪಡೆಯಲಿದೆ.
ನಿಮಗೆಲ್ಲಾ ನಮ್ಮ ಪ್ರೇಮ್ ಗೊತ್ತೇ ಇರಬೇಕು. ಅದೇ ಸ್ವಾಮಿ ಜೋಗಿ ಹಾಗೂ ಎಕ್ಸ್‌ಕ್ಯೂಸ್ ಮಿ ಮತ್ತಿತರ ಹಿಟ್ ಚಿತ್ರವನ್ನು ಕನ್ನಡಕ್ಕೆ ನೀಡಿ ಪ್ರೀತಿ ಏಕೆ ಭೂ ಮೇಲಿದೆ ನಟಿಸಿ ಸೋತರಲ್ಲಾ, ಅವರೇ. ಇವರ ಶಿಷ್ಯ ಕೋಟಿಯಲ್ಲಿ ಒಬ್ಬರೇ ವಿಜಯ್ ಕುಮಾರ್. ಹೀಗಾಗಿ ಈ ಚಿತ್ರ ಸಾಕಷ್ಟು ನಿರೀಕ್ಷೆ ಹೊಂದಿರುವುದಂತೂ ಸುಳ್ಳಲ್ಲ.
ಇಟಾಲಿಯನ್ ಕಿಚನ್ ಕಂಪನಿಯೊಂದರಲ್ಲಿ ಕೆಲಸಕ್ಕಿದ್ದ ಇವರು, ಇಲ್ಲಿಗೆ ಬರುವ ಸಿನಿಮಾ ಕಲಾವಿದರನ್ನು ನೋಡುತ್ತಲೇ ಸಿನಿಮಾ ಕನಸು ಕಟ್ಟಿದರು. ಪ್ರೇಮ್ ಪಾಳಯ ಸೇರಿಕೊಂಡ ಇವರು ಮೊನ್ನೆ ಮೊನ್ನೆಯವರೆಗೂ ಅಂದರೆ ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದವರೆಗೂ ಪ್ರೇಮ್ ಜತೆಯಾಗಿಯೇ ದುಡಿದರು. ಈಗ ಸ್ವತಂತ್ರ ನಿರ್ದೇಶಕರಾಗಿ ಭಡ್ತಿ ಪಡೆದಿದ್ದಾರೆ.
ಗುಬ್ಬಿ ಚಿತ್ರದ ಬಗ್ಗೆ ಇನ್ನೊಂದು ಹೇಳಲೇ ಬೇಕು. ಈ ಚಿತ್ರಕ್ಕೆ ಐವರು ನಾಯಕರು. ಮುಂಬೈ ಮೂಲದ ಮಾಡೆಲ್ ರೀಮಾ ವೋರಾ ಚಿತ್ರದ ನಾಯಕಿ. ಉಳಿದದ್ದನ್ನು ಮುಂದೆ ಯಾವತ್ತಾದರೂ ತಿಳಿಯೋಣ.