ಪತ್ರದ ಮೂಲಕ, ಟೆಲಿಫೋನಲ್ಲಿ ಪ್ರೀತಿಸುವಂತೆ ಮಾಡಿದ್ದ ರಮೇಶ್ ಇದೀಗ ಇಂಟರ್ನೆಟ್ಟಿನಲ್ಲಿ ಪ್ರೀತಿಸುವ ಕಾರ್ಯಕ್ಕೆ ಇಳಿದಿದ್ದಾರೆ. ಇಂಟರ್ನೆಟ್, ಸೋಶಿಯಲ್ ನೆಟ್‌ವರ್ಕಿಂಗ್ ಸೈಟ್‌ಗಳು, ಮಾಲ್ ಪರಂಪರೆ ಜನಪ್ರಿಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಸಾರಿ ಇದರತ್ತ ರಮೇಶ್ ಗಮನ ಹರಿಸಿದ್ದಾರೆ.
ಇಷ್ಟೆಲ್ಲ ಹೇಳಿದ ಮೇಲೆ ಎಲ್ಲರಿಗೂ ಗೊತ್ತಾಗಿರಬೇಕು ಇದು 'ಪ್ರೀತಿಯಿಂದ ರಮೇಶ್' ಚಿತ್ರದ ಕಥಾ ಹಂದರ ಅಂತ. ಹೌದು. ಮಾಲ್ ಮಾಲೀಕ ರಮೇಶ್ ಹಾಗೂ ನಟಿ ರಮನೀತು ಚೌದರಿ ಮಾಲ್ ಪಕ್ಕದ ಮೂಲೆ ಅಂಗಡಿಯೊಂದರ ಮಾಲಕಿ. ಇವರಿಬ್ಬರ ನಡುವೆ ನಡೆಯುವ ಅಂತರ್ಜಾಲ ಪ್ರೇಮವೇ ಪ್ರೀತಿಯಿಂದ ರಮೇಶ್. ಇಲ್ಲಿ ಇದುವರೆಗೆ ರಮೇಶ್ ಚಿತ್ರದಲ್ಲಿ ಇರುತ್ತಿದ್ದ ತ್ರಿಕೋನ ಪ್ರೇಮ ಕಥೆ ಇಲ್ಲ. ಹಾಗಾಗಿ ಯಾರಿಗೂ ನಿರಾಸೆ ಆಗುವ ಸನ್ನಿವೇಶವಿಲ್ಲ.
ಬಹು ವರ್ಷದ ಹಿಂದೆ ಗಂಭೀರ ಪತ್ರ, ನಂತರ ಸೋತು ನಾಯಕಿಯನ್ನು ಬಿಟ್ಟುಕೊಡುವ ತ್ಯಾಗಿಯ ಪಾತ್ರ ಹಾಗೂ ಇತ್ತೀಚೆಗೆ ಹಾಸ್ಯ ಪಾತ್ರಗಳ ಮೂಲಕ ಮಿಂಚಿದ್ದ ರಮೇಶ‌್‌ಗೆ ಇದೊಂದು ವಿಭಿನ್ನ ಪಾತ್ರದ ಚಿತ್ರವಾಗಿ ಲಭಿಸಿದೆಯಂತೆ.
ಈ ಚಿತ್ರ ಕೇವಲ ಪ್ರೀತಿಯ ಸುತ್ತ ಮಾತ್ರ ಸುತ್ತುವುದಿಲ್ಲ. ಬದಲಾಗಿ ಒಂದು ಸಾಮಾಜಿಕ ಜಾಗೃತಿಯ ಸಂದೇಶವನ್ನೂ ಬಿತ್ತರಿಸುತ್ತದೆಯಂತೆ. ಒಟ್ಟಾರೆ ಇಡೀ ಚಿತ್ರತಂಡ ವಿಪರೀತ ಶ್ರಮಿಸಿದೆಯಂತೆ. ಅದರ ಫಲವಾಗಿ ಮೂಡಿ ಬಂದಿದ್ದು ಪ್ರೀತಿಯಿಂದ ರಮೇಶ್. ಈಗಾಗಲೇ ರಾಜ್ಯದ ಹಲವೆಡೆ ಚಿತ್ರ ಬಿಡುಗಡೆ ಆಗಿದೆ.