ಈಗಾಗಲೇ ಒಮ್ಮೆ ಅಧ್ಯಕ್ಷ ಗಾದಿ ಏರಿ ಅನುಭವ ಹೊಂದಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಈ ಜಾಗದಲ್ಲಿ ಕುಳಿತು ಹಲವು ಸಾಧನೆ ಮಾಡುವ ಕನಸನ್ನು ಹೊತ್ತಿದ್ದಾರಂತೆ. ಹೌದು. ಸೋಲಿನ ಸುಳಿಯಲ್ಲಿ ಇಂದು ಕನ್ನಡ ಮಾತ್ರವಲ್ಲ ಅಕ್ಕ ಪಕ್ಕದ ಭಾಷೆಗಳಾದ ತಮಿಳು, ತೆಲುಗು ಸಹ ಸೇರಿವೆ. ಇಲ್ಲಿಯೂ ಗೆದ್ದವ ಬಲಭೀಮ, ಸೋತವ ಕೋಡಂಗಿ ಅನ್ನುವಂತಾಗಿದೆಯಂತೆ. ಇದನ್ನು ಹೇಳಿದ್ದು ಬೇರಾರೂ ಅಲ್ಲ ಖುದ್ದು ಬಸಂತ್ ಕುಮಾರ್ ಅವರೇ.
ಒಂದು ಚಿತ್ರ ಗೆದ್ದರೆ, ಅದೇ ಮಾದರಿಯ ಹತ್ತಾರು ಚಿತ್ರಗಳು ಬರುತ್ತವೆ. ಚಿತ್ರರಂಗದಲ್ಲಿ ಸಿನಿಮಾ ಮಾಡುವವರ ಫಾರ್ಮುಲಾ ಬದಲಾಗಿಲ್ಲ. ಒಂದೆರಡು ಸಿದ್ದಾಂತಕ್ಕೆ ಮಾತ್ರ ಗಂಟು ಬಿದ್ದಿದ್ದಾರೆ. ಕೆಲವರು ಕೊಂಚ ಬದಲಾಯಿಸಿಕೊಳ್ಳುತ್ತಾರೆ ಹಾಗೂ ಗೆಲ್ಲುತ್ತಾರೆ ಎನ್ನುವ ಮಾತನ್ನು ಯಾವುದೇ ಅಳುಕಿಲ್ಲದೇ ಆಡುತ್ತಾರೆ.
ನೇರ ಮಾತಿಗೆ ಬಸಂತ್ ಹೆಸರುವಾಸಿ. ನನಗೆ ಯಾರ ಹಂಗೂ ಇಲ್ಲ. ಅದು ಬೇಕಿಲ್ಲ. ಇದ್ದದ್ದನ್ನು ಇದ್ದ ಹಾಗೇ ಹೇಳುತ್ತೇನೆ. ತಪ್ಪಾದರೆ ಧಿಕ್ಕರಿಸುತ್ತೇನೆ ಎಂದು ಮುಲಾಜಿಲ್ಲದೇ ಹೇಳುತ್ತಾರೆ.
ಚಿತ್ರರಂಗ ಗೆಲ್ಲಲೇ ಬೇಕೆಂಬ ಆಶಯ ನಿರ್ಮಾಪಕರಿಗೆ ಇದ್ದರೆ ಅವರು ಚಿತ್ರ ನಿರ್ಮಾಣ ಹೇಗೆ, ಯಾವ ರೀತಿ ಮತ್ತು ಜನರಿಗೆ ಎಷ್ಟು ಹತ್ತಿರವಾದ ವಿಷಯ ಆಯ್ಕೆ ಮಾಡಿಕೊಳ್ಳಬೇಕೆಂಬ ಟ್ಯೂಷನ್ ಪಡೆಯಬೇಕಿದೆ. ಇಂದಿಗೂ ನಿರ್ಮಾಪಕರನ್ನು ವಿಚಾರಿಸುವ ಪ್ರವೃತ್ತಿ ಬೆಳೆದಿರಲಿಲ್ಲ. ಇನ್ನು ಮಂಡಳಿ ಚಿತ್ರ ನಿರ್ಮಾಪಕರನ್ನು ಸಹ ಕೂಲಂಕುಷವಾಗಿ ವಿಚಾರಿಸಿ ಚಿತ್ರ ನಿರ್ಮಾಣಕ್ಕೆ ಅವಕಾಶ ನೀಡಲಿದೆ ಅಂತಾರೆ.
ಸಿನಿಮಾಗಳ ಸೋಲಿಗೆ ನಿರ್ದೇಶಕರೇ ಹೊಣೆ. ಹಿಂದೆ ಸಾಹಿತ್ಯಾಧಾರಿತ ಕೃತಿಗಳು ಸಿನಿಮಾ ರೂಪ ಪಡೆಯುತ್ತಿದ್ದವು. ಕಾದಂಬರಿಗಳು ಚಿತ್ರ ಆಗುತ್ತಿದ್ದವು. ಆದರೆ ಇಂದು ಆ ಸ್ಥಿತಿಯೇ ಇಲ್ಲ. ಯಾರೋ ಬರುತ್ತಾರೆ, ಹಣ ಹೂಡುತ್ತಾರೆ, ಚಿತ್ರ ಗೆದ್ದರೆ ಇನ್ನೊಂದು ಇಲ್ಲವಾದರೆ ಬಂದ ದಾರಿಗೆ ಸುಂಕವಿಲ್ಲ ಅಂತ ಹೋಗುತ್ತಾರೆ. ಈ ರೀತಿಯ ಬೆಳವಣಿಗೆಯನ್ನು ನಿಲ್ಲಿಸುವುದು ಸದ್ಯ ನಮ್ಮ ಮುಂದಿರುವ ಗುರಿ ಎನ್ನುತ್ತಾರೆ. ಇವರ ಯತ್ನ ಫಲಕಾರಿಯಗಲಿ.