ಅದೆಷ್ಟೇ ಚೆನ್ನಾಗಿ ಅಭಿನಯಿಸಿದರೂ ಅದೃಷ್ಟವಿದ್ದರೆ ಮಾತ್ರ ಗಾಂಧಿನಗರದಲ್ಲಿ ನೆಲೆ ಸಿಗುತ್ತದೆ. ನಾವು ಹೀಗೆ ಹೇಳೋದಕ್ಕೂ ಕಾರಣವಿದೆ. ಹಾಗೆ ಸುಮ್ಮನೆ, ಮೊಗ್ಗಿನ ಮನಸ್ಸಿನಂತ ಉತ್ತಮ ಚಿತ್ರಗಳಲ್ಲಿ ಅಭಿನಯಿಸಿದ ಮಾನ್ಸಿ ಇದೀಗ ಎಲ್ಲಿ ಇದ್ದಾರೆ ಎನ್ನುವುದನ್ನು ಹುಡುಕುವ ಸ್ಥಿತಿ ಎದುರಾಗಿದೆ.
ಹಾಗೆ ಸುಮ್ಮನೆ ಸಿಕ್ಕ ಈ ಮಾನ್ಸಿಯವರನ್ನು ಮಾತಿಗೆಳೆದರೆ 'ಇಲ್ಲಿ ಇದ್ದು ಏನು ಮಾಡೋದು. ಅವಕಾಶ ಬೇಕಲ್ಲ. ಅದು ಸಿಕ್ಕಾಗಿ ಬರುತ್ತೇನೆ. ಇಲ್ಲದಿದ್ದಾಗ, ಸಿಗುವಲ್ಲಿಗೆ ಹೋಗುತ್ತೇನೆ. ಅಲ್ಲದೇ ಎಲ್ಲಾ ಕಡೆ ತಳುಕಿ ಬಳುಕುತ್ತಾ ಹೋಗಿ ಅಂಗಲಾಚುವ ರೂಢಿ ನನಗಿಲ್ಲ' ಎಂದು ಖಾರವಾಗಿ ಹೇಳುತ್ತಾರೆ.
ಸದ್ಯ ಇವರು ಪಟ್ರೆ ಲವ್ಸ್ ಪದ್ಮ ಚಿತ್ರದ ನಾಯಕ ಅಜಿತ್ ಜತೆ 'ಶಿವಕಾಶಿ' ಚಿತ್ರದಲ್ಲಿ ಕೊಂಚ ಬ್ಯೂಸಿ ಆಗಿದ್ದಾರೆ. ಚಿತ್ರದ ಶೂಟಿಂಗ್ ಬಹುತೇಕ ಪೂರ್ಣಗೊಂಡಿದೆ. ಇವರ ಅಭಿನಯದ ಇನ್ನೊಂದು ಚಿತ್ರ 'ನಾಗವಲ್ಲಿ'. ಇದಿನ್ನೂ ಬಿಡುಗಡೆ ಆಗಿಲ್ಲ. ಇದರಲ್ಲಿ ಮಾನ್ಸಿ ಉತ್ತಮ ಅಭಿನಯ ಇದೆಯಂತೆ.
ಮಾನ್ಸಿಗೆ ದ್ವಿಚಕ್ರ ವಾಹನ ಚಾಲನೆ ಮಡುವುದು ಅಂದರೆ ಬಲೇ ಮೋಜಂತೆ. ಬೈಕ್ ಹತ್ತಿ ಹೊರಟರೆ ಮುಗಿಯಿತು. ಎಷ್ಟು ಸುತ್ತಿದರೂ ಇನ್ನಷ್ಟು ಸುತ್ತುವ ಆಸೆಯಂತೆ. ಹೊರಗೆ ಸುತ್ತುವುದು ಹುಡುಗರ ಜತೆಗೋ ಅಥವಾ ತಾವೊಬ್ಬರೇ ಸುತ್ತಾರೋ ಅನ್ನುವ ವಿಷಯ ಮಾತ್ರ ಇನ್ನೂ ತಿಳಿದು ಬಂದಿಲ್ಲ.
ಚಿತ್ರಗಳು ಅಷ್ಟಾಗಿ ಕೈಲಿ ಇರದಿದ್ದರೂ, ಮಾನ್ಸಿ ಮಾನಸಿಕವಾಗಿ ಕಳೆಗುಂದಿಲ್ಲ. ತನ್ನ ಕೆಲಸದ ಜತೆಜತೆಗೆ ಓದು, ನೃತ್ಯಾಭ್ಯಾಸ, ಜಿಮ್ ಎಲ್ಲವನ್ನೂ ಕಟ್ಟುನಿಟ್ಟಾಗಿ ಮಾಡುತ್ತಾರೆ, ಮಾಡುತ್ತಿದ್ದಾರೆ. ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿ ಎಂಬ ಆಶಯ ಮಾತ್ರ ನಮ್ಮದು.