ದೊಡ್ಡ ಸ್ಟಾರ್‌ಗಳನ್ನು ಹಾಕಿಕೊಂಡು ಕೋಟಿ ವೆಚ್ಚದಲ್ಲಿ ಸಿನಿಮಾ ಮಾಡುವ ಬದಲು ಹಳ್ಳಿಯಲ್ಲಿರುವ ಪ್ರತಿಭೆಗಳನ್ನು ಹೆಕ್ಕಿ ತಂದು, ಅವರಿಗೆ ಅವಕಾಶ ನೀಡುವ ವಿಶಿಷ್ಟ ಕೆಲಸವನ್ನು ನಿರ್ದೇಶಕ ಅಫ್ತಾಬ್ ಮಾಡಹೊರಟಿದ್ದಾರೆ.
ಇವರು ರಾಜ್ಯದ ನಾನಾ ಭಾಗಗಳಿಗೆ ಈಗಾಗಲೇ ತೆರಳಿ ಪ್ರತಿಭಾ ಶೋಧ ನಡೆಸಲು ಆರಂಭಿಸಿ ಬಿಟ್ಟಿದ್ದಾರೆ. ಇವರು ಮಾಡ ಹೊರಟಿರುವ ಚಿತ್ರದ ಹೆಸರು ರಾಕ್‌ಸ್ಟಾರ್. ಇದೊಂದು ಪಕ್ಕಾ ಕಮರ್ಷಿಯಲ್ ಚಿತ್ರ. ಹತ್ತಾರು ಚಿತ್ರಗಳಿಗೆ ಸಹ ನಿರ್ದೇಶಕರಾಗಿ ದುಡಿದಿರುವ ಆಫ್ತಾಬ್‌ಗೆ ಧಾರಾವಾಹಿ, ಹಿಂದಿ ಆಲ್ಬಂಗಳ ಜತೆ ಸಾಕ್ಷ್ಯಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಇಲ್ಲಿನ ಅನುಭವವನ್ನೇ ಭಟ್ಟಿ ಇಳಿಸಿ ಚಿತ್ರ ನಿರ್ದೇಶನಕ್ಕೆ ಮುಂದಾಗಿದ್ದಾರೆ.
ಅಜಯ್ ಹಾಗೂ ವಿಠಲ್ ಎಂಬುವರು ಸೇರಿ ಕಥಾವಿಸ್ತಾರ ಮಾಡಿದ್ದಾರೆ. ರಮೇಶ್ ಆಲ್ಬೈ ಛಾಯಾಗ್ರಹಣವಿದೆ. ನಾಯಕ, ನಾಯಕಿ, ಪೋಷಕ ಪಾತ್ರಧಾರಿಗಳು, ಹಾಸ್ಯನಟರು, ಖಳನಾಯಕ ಪಾತ್ರಗಳು, ಬಾಲನಟರು ಹೀಗೆ ನಾನಾ ಕೆಟಗರಿಯ ಕಲಾವಿದರನ್ನು ಆಯ್ಕೆ ನಡೆಯಬೇಕಿದೆಯಂತೆ.
ಚಿತ್ರೀಕರಣ ಬಾಗಲಕೋಟೆ, ಬಿಜಾಪುರ, ಬಾದಾಮಿ ಹಾಗೂ ಬಳ್ಳಾರಿ ಸುತ್ತಮುತ್ತ ನಡೆಯಲಿದೆ. ಎಸ್.ಎಂ. ಬಾಬು ನಿರ್ಮಾಪಕರು. ಒಂದೂವರೆ ಕೋಟಿಯಲ್ಲಿ ಸಿನಿಮಾ. ಹದಿನೈದು ಲಕ್ಷವನ್ನು ಟ್ಯಾಲೆಂಟ್ ಹಂಟ್‌ಗೆ ಮೀಸಲಿಡಲಿದ್ದಾರೆ. ಸತೀಶ್ ಸಂಗೀತವಿದ್ದು, ಐದು ಹಾಡುಗಳಿವೆಯಂತೆ. ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ನೀಡಲು ಮುಂದಾಗಿರುವ ಆಫ್ತಾಬ್ ಸಾಹಸಕ್ಕೆ ಜಯವಾಗಲಿ.