ಕನ್ನಡ ಚಿತ್ರನಟ ಆನಂದ್ ಅವರನ್ನು ತ್ಯಾಗರಾಜನಗರದ ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಂಧಿಸಿದ್ದಾರೆ. ಯು2 ವಾಹಿನಿಯಲ್ಲಿ ನಿರೂಪಕನೂ ಆಗಿದ್ದ ಆನಂದ್ ಕಿರುತೆರೆಯಲ್ಲಿ ವೃತ್ತಿ ಜೀವನ ಆರಂಭಿಸಿ ನಂತರ ಒಂದೆರಡು ಸಿನಿಮಾಗಳಲ್ಲೂ ನಾಯಕನಾಗಿ ನಟಿಸಿದ್ದರು.
ಆನಂದ್ ಅವರು ನಿರೂಪಕನಾಗಿದ್ದ ಸಮಯದಲ್ಲಿ ಇಷ್ಟಪಟ್ಟು ಭರಣಿ ಆನಂದ್ ಅವರನ್ನು ಕಳೆದ ವರ್ಷ ಧರ್ಮಸ್ಥಳದಲ್ಲಿ ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ ಆತನ ಪತ್ನಿ ಭರಣಿ ಅವರಿಗೆ ಆಕೆಯ ಪೋಷಕರು ನೀಡಿದ್ದ ಒಡವೆಗಳನ್ನು ಆನಂದ್ ಮಾರಿದ್ದು, ಹೆಚ್ಚಿನ ಹಣಕ್ಕಾಗಿ ಭರಣಿಯವರನ್ನು ಪೀಡಿಸುತ್ತಿದ್ದ ಎನ್ನಲಾಗಿದೆ. ಆನಂದನ ಪತ್ನಿ ಭರಣಿ ತ್ಯಾಗರಾಜನಗರದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಹಣದಾಸೆಗಾಗಿ ನನ್ನನ್ನು ದಿನವೂ ಪೀಡಿಸುತ್ತಿದ್ದ. ಹಣಕ್ಕಾಗಿ ತಂದೆಮನೆಯವರನ್ನು ಕೇಳಲು ನನಗೆ ಹೊಡೆಯುತ್ತಿದ್ದ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆನಂದ್ ಸೇರಿದಂತೆ ಅವರ ತಂದೆ ಹಾಗೂ ನಟಿ ರಮ್ಯಾ ಬರ್ನೆ ವಿರುದ್ಧವೂ ಭರಣಿ ದೂರು ನೀಡಿದ್ದಾರೆ. ಆನಂದ್‌ಗೆ ರಮ್ಯಾ ಬರ್ನೆ ಜೊತೆಗೆ ಅಫೇರ್ ಇದೆ ಎಂಬ ವಿಷಯ ನನಗೆ ತೀರಾ ಇತ್ತೀಚೆಗಷ್ಟೆ ತಿಳಿಯಿತು. ಅಲ್ಲದೆ ಆನಂದ್ ಅವರ ತಂದೆಯೂ ನನಗೆ ಆನಂದ್ ಹಿಂಸೆ ನೀಡುವುದಕ್ಕೆ ಸಹಕಾರ ನೀಡುತ್ತಿದ್ದರು ಎಂದು ಭರಣಿ ದೂರಿದ್ದಾರೆ.
ನನ್ನೆದೆಯ ಹಾಡು ಚಿತ್ರ ಆಱ್ಥಿಕ ಮುಗ್ಗಟ್ಟಿನಲ್ಲಿದೆ. ಹಾಗಾಗಿ ನಿನ್ನ ಒಡವೆಗಳನ್ನು ಮಾರಿ ಚಿತ್ರವನ್ನು ಕಷ್ಟದಿಂದ ಪಾರು ಮಾಡೋಣ ಎಂದು ನನ್ನ ತವರು ಮನೆಯವರು ನೀಡಿದ ಒಡವೆಗಳನ್ನು 50 ಲಕ್ಷ ರೂಪಾಯಿಗಳಿಗೆ ಮಾರಿದ್ದ. ಆದರೂ ಮತ್ತೆ ಪತ್ತೆ ನನಗೆ ಹಣ ತರಲು ಪೀಡೆ ಕೊಡುತ್ತಿದ್ದ ಎಂದು ಭರಣಿ ಹೇಳಿದ್ದಾರೆ.
ಆನಂದ್ ಯು2 ವಾಹಿನಿಯಲ್ಲಿ ನಿರೂಪಕನಾಗಿ ಮನೆಮಾತಾಗಿದ್ದಾರೆ. ಈ ಹಿಂದೆ ಮನಸುಗಳ ಮಾತು ಮಧುರ ಎಂಬ ಚಿತ್ರದಲ್ಲಿ ನಟಿಸಿದ್ದರು. ಆ ಚಿತ್ರ ತೋಪೆದ್ದಿತು. ನಂತರ ನನ್ನೆದೆಯ ಹಾಡು ಎಂಬ ಚಿತ್ರದಲ್ಲೂ ನಾಯಕನಾಗಿ ನಟಿಸಿದ್ದರು. ಈ ಚಿತ್ರದಲ್ಲಿ ನಾಯಕಿಯಾಗಿ ರಮ್ಯಾ ಬರ್ನೆ ನಟಿಸಿದ್ದರು.