ನಾನು ನನ್ನ ಕನಸು ಎನ್ನುತ್ತಾ ಕನ್ನಡದಲ್ಲಿ ನಿರ್ದೇಶನಕ್ಕೂ ಇಳಿದ ರಾಷ್ಟ್ರಪ್ರಶಸ್ತಿ ವಿಜೇತ ಕನ್ನಡದ ಹೆಮ್ಮೆಯ ನಟ ಪ್ರಕಾಶ್ ರೈ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ. ಇದೇ ಬರುವ ಜೂನ್ 24ರಂದು ಪ್ರಕಾಶ್ ರೈ ಬಾಲಿವುಡ್ಡಿನ ಕೊರಿಯೋಗ್ರಾಫರ್ ಪೋನಿ ವರ್ಮಾರ ಜೊತೆ ಬೆಂಗಳೂರಿನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಪ್ರಕಾಶ್ ರೈ ಈಗ್ಗೆ ಕೆಲವೇ ತಿಂಗಳ ಹಿಂದಷ್ಟೇ ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿ ಅವರಿಗೆ ವಿಚ್ಛೇದನ ನೀಡಿದ್ದರು. 1994ರಲ್ಲಿ ಲಲಿತಾ ಕುಮಾರಿಯನ್ನು ಮದುವೆಯಾಗಿದ್ದ ಪ್ರಕಾಶ್ ರೈ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಾಗಿರಲಿಲ್ಲ. ತನ್ನ ಹಾಗೂ ಹೆಂಡತಿ ನಡುವೆ ಅಭಿಪ್ರಾಯ ಬೇಧಗಳಿವೆ ಎಂದಿದ್ದ ಪ್ರಕಾಶ್ ರೈ ವಿಚ್ಛೇದನಕ್ಕೆ ಕೆಲ ವರ್ಷಗಳ ಹಿಂದೆ ಅರ್ಜಿ ಹಾಕಿದ್ದರು. ನ್ಯಾಯವಾದಿಗಳು ಇವರನ್ನು ಎಷ್ಟೇ ಒಂದುಗೂಡಿಸಲು ಪ್ರಯತ್ನಿಸಿದ್ದರೂ, ಪ್ರಕಾಶ್ ರೈ ಸ್ಪಷ್ಟವಾಗಿ ತಮಗೆ ಒಂದಾಗುವುದು ಬೇಕಿಲ್ಲ, ವಿಚ್ಛೇದನವಷ್ಟೇ ಬೇಕು ಎಂದಿದ್ದರು. ಆದರೆ ಈ ದಾಂಪತ್ಯ ಮುರಿದು ಬೀಳಲು ಪೋನಿ ವರ್ಮಾರನ್ನು ಪ್ರಕಾಶ್ ರೈ ಪ್ರೀತಿಸುತ್ತಿದ್ದುದೂ ಒಂದು ಕಾರಣ ಎಂದೂ ಹೇಳಲಾಗುತ್ತಿದೆ.
IFM
ಪೋನಿ ವರ್ಮಾ ಸದ್ಯ ಬಾಲಿವುಡ್‌ನಲ್ಲಿ ಭಾರೀ ಹೆಸರು ಮಾಡುತ್ತಿರುವ ನೃತ್ಯ ನಿರ್ದೇಶಕಿ. ಚುಪ್ ಚುಪ್ ಕೇ, ಬಿಲ್ಲೂ, ಗರಂ ಮಸಾಲಾ, ನಮಸ್ತೇ ಲಂಡನ್ ಮತ್ತಿತರ ಚಿತ್ರಗಳಿಗೆ ನೃತ್ಯ ನಿರ್ದೇಶಿಸಿದ್ದ ಪೋನಿ ವರ್ಮಾ ಬಗ್ಗೆ ಬಾಲಿವುಡ್ಡಿನಲ್ಲಿ ಭಾರೀ ಭರವಸೆಯಿದೆ. ಸದ್ಯ ಸಾಕಷ್ಟು ಅಥ್ಯುತ್ತ ಆಫರ್‌ಗಳನ್ನು ಹೊಂದಿರುವ ಪೋನಿ ವರ್ಮಾ ಇದೀಗ ಪ್ರತಿಭಾ ಶಾಲಿ ನಟ ಪ್ರಕಾಶ್ ರೈಯ ಕೈ ಹಿಡಿಯಲಿದ್ದಾರೆ.
ನಾನು ನನ್ನ ಕನಸು ಚಿತ್ರದ ಪ್ರೀಮಿಯರ್ ಪ್ರದರ್ಶನದ ಸಂದರ್ಭ ಮೊನ್ನೆ ಮೊನ್ನೆಯಷ್ಟೆ ಪ್ರಕಾಶ್ ರೈ ಮಾಧ್ಯಮ ಮಿತ್ರರೊಡನೆ ತಾನು ಹಾಗೂ ಪೋನಿ ವರ್ಮಾ ಶೀಘ್ರದಲ್ಲೇ ಮದುವೆಯಾಗುತ್ತಿದ್ದೇವೆ ಎಂದಿದ್ದಾರೆ. ಆದರೆ ಮದುವೆ ಯಾವಾಗ ಎಂಬುದು ಮಾತ್ರ ಇನ್ನೂ ಬಹಿರಂಗವಾಗಿಲ್ಲ.