ಓಂಪ್ರಕಾಶ್ ಯದ್ವಾತದ್ವಾ ಬೈದ್ರೂ ನಗುತ್ತಾ ಇದ್ದ ಜೆನ್ನಿಫರ್!
IFM
ಸಿಟ್ಟು, ಕೂಗಾಟ ಹಾಗೂ ಚೀರಾಟಕ್ಕೆ ಹೆಸರಾದವರು ನಿರ್ದೇಶಕ ಓಂಪ್ರಕಾಶ್ ರಾವ್. ಯಾರೊಬ್ಬರು ಕಣ್ಣಿಗೆ ಕಾಣಲಿಲ್ಲ ಎಂದರೆ, ಅವರಿಗಾಗಿ ಕಣ್ಣಿಗೆ ಕಾಣುವವರ ಮೇಲೆ ಹಾರಾಡಿ ಬಿಡುತ್ತಾರೆ. ಇತ್ತೀಚೆಗೆ ಇವರು ಹುಲಿ ಚಿತ್ರದ ಕುರಿತು ನಾಲ್ಕು ಮಾತನಾಡಲು ಕರೆದಿದ್ದ ಸಮಾರಂಭವೊಂದರಲ್ಲೂ ಇದೇ ಕಥೆ. ಚಿತ್ರದ ನಾಯಕಿ ಜೆನ್ನಿಫರ್ ಕೋತ್ವಾಲ್ ಸಮಯಕ್ಕೆ ಸರಿಯಾಗಿ ಬರಲಿಲ್ಲ ಅಂತ ರೇಗಾಡಿ ಬಿಟ್ಟರು. ಪತ್ರಕರ್ತರ ಎದುರೇ ಬಳಸಬಾರದ ಪದಗಳನ್ನೆಲ್ಲಾ ಬಳಸಿ ಪತ್ರಕರ್ತರಿಗೂ ಮುಜುಗರವಾಗುವಂತೆ ಮಾತಾಡಿಬಿಟ್ಟರು.
ಅಲ್ಲಾ ಸಾರ್ ನಾನು ರಾಮನಗರದಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಸೆಟ್‌ನಿಂದ ಹಾಗೇ ಬರುವಾಗ ಮಾರ್ಗದಲ್ಲಿ ಒಂದು ಟಿ ಶರ್ಟ್ ತೆಗೆದುಕೊಂಡು ಹಾಕಿ ಬಂದಿದ್ದೇನೆ. ಇವರಿಗೊಂದು ಟೈಂಸೆನ್ಸ್ ಬೇಡವಾ. ಎರಡು ಮೂರು ಸಾರಿ ಫೋನ್‌ಗೆ ಟ್ರೈ ಮಾಡಿದರೂ, ನಾಟ್ ರೀಚೆಬಲ್. ನಾನೇ ಬಂದಿದ್ದೇನೆ, ಇವರಿಗೆ ಏನು ದಾಡಿ ಎಂದು ಕೂಗಾಡಿದರು.
ನಂತರ ಜೆನ್ನಿ ಬಂದರು, ಒಂದಿಷ್ಟು ಮಾತಿನ ಪ್ರಯೋಗವೂ ಆಯಿತು. ಆದರೆ ಪಾಪ, ಜೆನ್ನಿಗೆ ಮಾತ್ರ ಒಂದಕ್ಷರ ಕನ್ನಡವೂ ಅರ್ಥವಾಗಲಿಲ್ಲ ಅಂತ ಕಾಣುತ್ತೆ. ಮುದ್ದಿಸುತ್ತಿದ್ದ ಮುಂಗುರುಳು ತೀಡುತ್ತಾ ಪತ್ರಕರ್ತರಿಗೆ ಮುಗುಳ್ನಗುತ್ತಾ ಪೋಸ್ ಕೊಡುತ್ತಿದ್ದರು! ಅವರು ಬೈದ ಶಬ್ದಗಳಿಗೆ ಅರ್ಥ ಗೊತ್ತಿದ್ದರೆ ಖಂಡಿತ ಜೆನ್ನಿ ಬೈದು ಚಿತ್ರದಿಂದ ಎದ್ದೋಡುತ್ತಿದ್ದರೇನೋ.
ಇಷ್ಟೆಲ್ಲ ಪುರಾಣ ಆದ್ಮೇಲೆ, ಚಿತ್ರದ ಬಗ್ಗೆ ಕಥೆ ಬಿಚ್ಚಿದರು ಓಂಪ್ರಕಾಶ್. ಚಿತ್ರದಲ್ಲಿ ಸ್ವಂತಿಕೆ ಇದೆ. ರಿಮೇಕ್, ರೀಮಿಕ್ಸ್ ಏನೂ ಇಲ್ಲ ಅಂತ ಹೇಳಿದರು. ಎಲ್ಲಾ, ಸ್ವಮೇಕ್ ಮಹಿಮೆ ಎಂದರು. ಎಕೆ 47 ನಂತರ ಹುಲಿ ಚಿತ್ರವೇ ಇರಬೇಕು ತಾವು ತುಂಬಾ ಇಷ್ಟಪಟ್ಟು ಕೆಲಸ ಮಾಡಿದ್ದು. ನಾನು ಚಿತ್ರ ನಿರ್ದೇಶನ ವಿಳಂಬ ಮಾಡುತ್ತೇನೆ ಎನ್ನುವ ಆರೋಪ ಇದೆ. ಆದರೆ ಸರಿಯಾದ ಸಮಯಕ್ಕೆ ನಿರ್ಮಾಪಕರು ಹಣ ನೀಡುತ್ತಾ ಹೋದರೆ ಚಿತ್ರ ಬಹುಬೇಗ ಸಿದ್ಧವಾಗುತ್ತದೆ. ಅದಕ್ಕೆ ಹುಲಿಯೇ ಸಾಕ್ಷಿ ಅಂದರು.
ಚಿತ್ರದಲ್ಲಿ ಆದಿ ಲೋಕೇಶ್‌ಗೂ ಒಂದು ಉತ್ತಮ ಪಾತ್ರವಿದೆಯಂತೆ. ಇದು ಅವರಿಗೆ ಸ್ಯಾಂಡಲ್‌ವುಡ್‌ನಲ್ಲಿ ಒಳ್ಳೆ ನೆಲೆ ಒದಗಿಸಲಿದೆ ಎಂಬ ಮಾತನ್ನೂ ಅಂದು ಓಂ ಆಡಿದರು. ಎಲ್ಲಾ ಅವರಂದು ಕೊಂಡಂತೆ ಆಗಲಿ. ಇಲ್ಲದಿದ್ದರೆ ಬೈಸಿಕೊಳ್ಳಬೇಕಾಗುತ್ತದೆ!