ದುನಿಯಾ ವಿಜಯ್ ಅವರ ಬಹು ನಿರೀಕ್ಷೆಯ ಚಿತ್ರ ಶಂಕರ್ ಐಪಿಎಸ್ ಚಿತ್ರ ಮೇ ಕೊನೆಯಲ್ಲಿ ತೆರೆ ಕಾಣಲಿದೆಯಂತೆ. ಈ ವಿಷಯವನ್ನು ವಿಜಯ್ ಅವರೇ ಇತ್ತೀಚೆಗೆ ನಡೆದ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ತಿಳಿಸಿದ್ದಾರೆ. ಸಿನಿಮಾ ಕೂಡ ಒಂದು ಪರೀಕ್ಷೆ ಇದ್ದ ಹಾಗೆ. ಇಲ್ಲಿ ಪಾಸಾದವ ಗೆದ್ದ, ಫೇಲ್ ಆದವ ಬಿದ್ದ. ನಮ್ಮ ಕೆಲಸವೂ ಹಾಗೆ ಎಷ್ಟೇ ಚೆನ್ನಾಗಿ ಇರಲಿ, ಅದನ್ನು ನೋಡಿದ ಪ್ರೇಕ್ಷಕ ನಿರ್ಧರಿಸುತ್ತಾನೆ. ಒಮ್ಮೊಮ್ಮೆ ಎಷ್ಟೇ ಚೆನ್ನಾಗಿ ಕೆಲಸ ಮಾಡಿದ್ದರೂ ಬಿಡುಗಡೆ ಆದ ನಂತರ ಜನ ನೀಡುವ ರಿಸಲ್ಟ್ ಮೇಲೆ ಚಿತ್ರದ ಪಾಸೋ, ಫೇಲೋ ಅನ್ನೋದು ನಿರ್ಧಾರ ಆಗುತ್ತದೆ ಎನ್ನುತ್ತಾರೆ ವಿಜಿ.
ನಿರ್ಮಾಪಕ ಕೆ. ಮಂಜು ಸೇರಿದಂತೆ ನಾವೆಲ್ಲಾ ಜೀವ ಒತ್ತೆ ಇಟ್ಟು ಕೆಲಸ ಮಾಡಿದ್ದೇವೆ. ಈ ಚಿತ್ರ ನನ್ನ ಸಿನಿಮಾ ಬದುಕಿನ ಬಹುದೊಡ್ಡ ಮೈಲಿಗಲ್ಲಾಗಲಿದೆ ಎಂದ ವಿಜಿ, ಚಿತ್ರವನ್ನು ಕಡಿಮೆ ಮಂದಿರಗಳಲ್ಲಿ ಉತ್ತಮ ಪ್ರಚಾರದೊಂದಿಗೆ ಬಿಡುಗಡೆ ಮಾಡುವಂತೆ ಕೆ. ಮಂಜು ಅವರಿಗೆ ಸಲಹೆಯನ್ನೂ ಉಚಿತವಾಗಿ ನೀಡಿದರು.
ಸದಾ ಹಾಸ್ಯ ಪಾತ್ರದ ಮೂಲಕ ಹೊಟ್ಟೆ ಹುಣ್ಣಾಗಿಸುತ್ತಿದ್ದ ರಂಗಾಯಣ ರಘು ಒಬ್ಬ ವಕೀಲರಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ. ರಘು ಹಾಗೂ ಪೊಲೀಸ್ ಅಧಿಕಾರಿ ವಿಜಯ್ ನಡುವಿನ ವಾಕ್ಸಮರ ಚಿತ್ರದ ಪ್ರಮುಖ ಹೈಲೈಟ್ ಅಂತೆ. ಯಾವುದಕ್ಕೂ ಚಿತ್ರ ಬಿಡುಗಡೆವರೆಗೂ ಕಾಯಬೇಕು.