ಪುನೀತ್ ಅಭಿನಯದ ಪೃಥ್ವಿ ಚಿತ್ರ ಗೆದ್ದಿದೆಯಾ ಸಾರ್ ಎಂಬ ಪ್ರಶ್ನೆ ಕೇಳಿದ್ರೆ ನಿರ್ಮಾಪಕ ಸೂರಪ್ಪ ಬಾಬು ದೋಸೆ ಕಥೆ ಹೇಳುತ್ತಾರೆ. ಹೌದು. ದೋಸೆಯನ್ನು ಕಾವಲಿ ಮೇಲೆ ಹಾಕಿದ ತಕ್ಷಣ ತೆಗೆಯಲಾಗದು. ಕನಿಷ್ಠ 3 ರಿಂದ 5 ನಿಮಿಷ ಕಾಯಬೇಕು. ಅದೇ ತರ ಚಿತ್ರದ ಯಶಸ್ಸು ತಿಳಿಯಲು 50 ದಿನ ಕಾಯಬೇಕು ಅನ್ನುತ್ತಾರೆ!
ಹೌದು, ಇವರ ಮಾತಲ್ಲೂ ಸತ್ಯವಿದೆ. ಬಿಡುಗಡೆ ಆದ ವಾರಕ್ಕೆಲ್ಲಾ ಚಿತ್ರ ಯಶಸ್ಸು ಅನ್ನುವವರು ಗಾಂಧಿನಗರದಲ್ಲಿ ಸಾಕಷ್ಟು ಮಂದಿ ಇದ್ದಾರೆ. ಆದರೆ ತಿಂಗಳ ನಂತರ ಹುಡುಕಿದರೂ ಎಲ್ಲೂ ಸಿಗುವುದಿಲ್ಲ. ಆದರೆ ಸೂರಪ್ಪ ಬಾಬು ಕಾದು ನೋಡುವ ಕಾರ್ಯಕ್ಕೆ ಮುಂದಾಗುತ್ತಾರೆ.
ಚಿತ್ರ ಗೆದ್ದಿದೆ ಎನ್ನುವುದರಲ್ಲಿ ಅಂತ ಸಂಶಯವಿಲ್ಲ. ಆದರೆ ಅದನ್ನು 50 ದಿನದ ನಂತರ ಅಧಿಕೃತವಾಗಿ ಹೇಳಬಹುದು. ಆದರೆ ಬೈಟು ಕಾಫಿ ಕುಡಿಯುತ್ತಾ ಗಾಂಧಿನಗರದ ಮೂಲೆ ಮೂಲೆಯಲ್ಲಿ ನಿಂತು ಪ್ರಥ್ವಿ ಸೋತಿದೆ ಎಂದು ಆಡಿಕೊಳ್ಳುವವರಿಗೆ ಸದ್ಯವೇ ಉತ್ತರ ನೀಡುವುದಿಲ್ಲ.
ಇದಕ್ಕೆಲ್ಲಾ ಸಮಯ ಬರಲಿದೆ. ಸದ್ಯ ಹೇಳಲೇ ಬೇಕೆಂದರೆ ರಾಜ್ಯದ 93 ಕೇಂದ್ರದಲ್ಲಿ ಚಿತ್ರದ ಬಿಡುಗಡೆ ಆಗಿದೆ. ಸದ್ಯ 65 ಕೇಂದ್ರಗಳಲ್ಲಿ ಚಿತ್ರ ಓಡುತ್ತಿದೆ. ಶೇ.70ರಿಂದ 80ರಷ್ಟು ಕಲೆಕ್ಷನ್ ಮುಂದುವರಿದಿದೆ. ಸ್ಯಾಟಲೈಟ್ ಹಾಗೂ ಟಿವಿ ಹಕ್ಕುಗಳಿಂದ ಎರಡು ವಾರದಲ್ಲಿ 6.45 ಕೋಟಿ ರೂ. ಆದಾಯ ಬಂದಿದೆ. ನಿರ್ಮಾಪಕರಾಗಿ ತಾವು ಗೆದ್ದಿದ್ದೇವೆ ಎಂದು ಧೈರ್ಯವಾಗಿ ಸೂರಪ್ಪ ಹೇಳಿಕೊಳ್ಳುತ್ತಾರೆ. ವಿಷಯ ಏನೇ ಇರಲಿ, ಇವರ ಯಶಸ್ಸು ಇನ್ನಷ್ಟು ಮುಂದುವರಿಯಲಿ. ಪ್ರಥ್ವಿಯಂಥ ಹತ್ತಾರು ಚಿತ್ರ ಇವರು ನಿರ್ಮಿಸಲಿ ಎಂಬುದು ಹಾರೈಕೆ.