ಪತ್ನಿ ಭರಣಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಲ್ಲಿ ಬಂಧಿತನಾಗಿರುವ ಕನ್ನಡ ಚಿತ್ರನಟ, ಕಿರುತೆರೆ ನಿರೂಪಕ ಆನಂದ್ ಅವರಿಗೆ ಮಂಗಳವಾರ (ಮೇ 18) 2ನೇ ಎಸಿಎಂಎಂ ಕೋರ್ಟ್ ಷರತ್ತು ಬದ್ಧ ಜಾಮೀನು ನೀಡಿದೆ. ಆನಂದ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ಪರಿಶೀಲಿಸಿದ ನಂತರ ಅವರಿಗೆ 25 ಸಾವಿರ ರೂ ಬಾಂಡ್ ಹಾಗೂ ಶ್ಯೂರಿಟಿ ಮೇಲೆ ಷರತ್ತು ಬದ್ಧ ಜಾಮೀನು ನೀಡಲಾಯಿತು. ಜೊತೆಗೆ ಪ್ರತಿ 15 ದಿನಗಳಿಗೊಮ್ಮೆ ಠಾಣೆಗೆ ಹಾಜರಾಗುವಂತೆ ಷರತ್ತು ವಿಧಿಸಲಾಗಿದೆ.
ಆನಂದ್ ತನ್ನ ಹೆಂಡತಿಗೆ ಪರದಕ್ಷಿಣೆ ಕಿರುಕುಳವಲ್ಲದೆ, ನಟಿಯೊಬ್ಬರೊಂದಿಗೆ ಅನೈತಿಕ ಸಂಬಂಧವಿತ್ತು ಎಂಬ ಆರೋಪವನ್ನೂ ಎದುರಿಸುತ್ತಿದ್ದಾರೆ. ಸ್ವತಃ ಪತ್ನಿ ಭರಣಿಯೇ ಈ ಹಿನ್ನೆಲೆಯಲ್ಲಿ ಹಲವು ಸಾಕ್ಷಿಗಳನ್ನು ಹೊಂದಿದ್ದಾರೆ ಎನ್ನಲಾಗಿದೆ.
ವರ್ಷದ ಹಿಂದೆ ಮದುವೆಯಾಗಿದ್ದರೂ, ಆನಂದ್ ಹಾಗೂ ನಟಿ ರಮ್ಯಾ ಬರ್ನ ನಡುವಿನ ಸಂಬಂಧ ನನಗೆ ಇತ್ತೀಚೆಗಷ್ಟೇ ತಿಳಿದಿತ್ತು. ಆದರೆ ಈ ವಿಚಾರ ನನಗೆ ತಿಳಿಯುವ ಮೊದಲೇ ಆನಂದ್ ನನಗೆ ಸಾಕಷ್ಟು ದೈಹಿಕ ಹಿಂಸೆ ನೀಡುತ್ತಿದ್ದರು. ಆನಂದ್ ಪ್ರತಿ ರಾತ್ರಿಯೂ ರಮ್ಯಾ ಬರ್ನ ಜೊತೆಗೆ ಫೋನಿನಲ್ಲಿ ನನ್ನೆದುರೇ ಮಾತನಾಡುತ್ತಿದ್ದರು. ನನಗೆ ಹೊಡೆದು ಬಡಿದು ಮಾಡುತ್ತಿದ್ದರು. ನನ್ನೆಲ್ಲಾ ಒಡವೆಯನ್ನು ಮಾರಿ 50 ಲಕ್ಷ ರೂಪಾಯಿ ದುಡ್ಡು ಸಂಪಾದಿಸಿದ್ದರು. ಆತನ ಸಿನಿಮಾ ವೃತ್ತಿಜೀವನಕ್ಕೆ ಸಹಾಯವಾಗಬಹುದೆಂಬ ಕಾರಣದಿಂದ ನಾನು ಒಪ್ಪಿದೆ. ಆದರೆ ಇದಾದ ನಂತರವೂ ಆನಂದ್ ನನಗೆ ಹೆಚ್ಚು ಹಣ ತರಲು ಧಮಕಿ ಹಾಕುತ್ತಿದ್ದರು, ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು ಎಂದು ಪೊಲೀಸರಲ್ಲಿ ಆನಂದ್ ಪತ್ನಿ ತನ್ನ ಅಳಲು ತೋಡಿಕೊಂಡಿದ್ದರು.
ಕಿರುತೆರೆಯಲ್ಲಿ ನಿರೂಪಕನಾಗಿ ಮನೆಮಾತಾಗಿದ್ದ ಆನಂದ್ ಒಂದೆರಡು ಚಿತ್ರಗಳಲ್ಲಿ ನಟಿಸಿದ್ದರು. ಇದೇ ಸಂದರ್ಭದಲ್ಲಿ ತನ್ನ ಜೊತೆ ನಾಯಕಿಯಾಗಿ ನಟಿಸಿದ್ದ ರಮ್ಯಾ ಬರ್ನೆ ಜೊತೆಗೆ ಅವರಿಗೆ ಪ್ರೇಮ ಅಂಕುರಿಸಿತ್ತು ಎನ್ನಲಾಗಿದೆ.