ಅಂದು ಕಹೋನಾ ಪ್ಯಾರ್ ಹೈ... ಅಂತ ಹುಚ್ಚೆಬ್ಬಿಸಿದ ನಟಿ ಅಮಿಷಾ ಪಟೇಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ? ಹೌದು. ಅದೇ ಅಮಿಷಾ ಪಟೇಲ್ ಈಗ ಸದ್ದಿಲ್ಲದೆ, ಸುದ್ದಿಯಿಲ್ಲದೆ ಕೂತಿರುವುದೂ ಕೂಡಾ ನಿಮಗೆ ಗೊತ್ತು. ಆದರೆ ಈಗ ಆಕೆ ಸುದ್ದಿ ಮಾಡಲು ಹೊರಟಿದ್ದಾಳೆ. ಆದರೆ ಬಾಲಿವುಡ್ಡಿನಲ್ಲಂತೂ ಖಂಡಿತಾ ಅಲ್ಲ, ನಮ್ಮ ಸ್ಯಾಂಡಲ್‌ವುಡ್ಡಿನಲ್ಲಿ!
ಹೌದು. ಅಮಿಷಾ ಪಟೇಲ್ ಕನ್ನಡಕ್ಕೆ ಬರುತ್ತಿದ್ದಾರೆ. ಅದೂ ನಾಯಕಿಯಾಗಿ. ಪ್ರೇಮ್ ನಿರ್ದೇಶನದ ಶಿವರಾಜ್ ಕುಮಾರ್ ಅಭಿನಯದ ಜೋಗಯ್ಯ ಚಿತ್ರಕ್ಕೆ ಅಮಿಷಾ ಪಟೇಲ್ ನಾಯಕಿಯಂತೆ. ಇದು ಬಹುತೇಕ ಪಕ್ಕಾ ಆಗಿದ್ದು, ಅಮಿಷಾ ಕೂಡಾ ಈ ಆಫರನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದಾರೆಂದು ನಂಬಲರ್ಹ ಮೂಲಗಳು ಹೇಳಿವೆ. ಈ ಚಿತ್ರವನ್ನು ರಕ್ಷಿತಾ ನಿರ್ಮಿಸುತ್ತಿರುವುದು ಕೂಡಾ ಗಮನಾರ್ಹ ಸಂಗತಿ.
ಅಂದು ರಾಜ್ ಸಿನಿಮಾಕ್ಕೆ ನಿಶಾ ಕೊಠಾರಿಯನ್ನು ಹಾಕಿಕೊಂಡು ಸಕತ್ ಗ್ಲ್ಯಾಮರಸ್ ಆಗಿ ಆಕೆಯನ್ನು ತೋರಿಸಿ ಈಗ ಅಮಿಷಾಗೆ ತನ್ನ ಮುಂದಿನ ಚಿತ್ರಕ್ಕೆ ಗಾಳ ಹಾಕಿದ್ದಾರೆ.
2000ರಲ್ಲಿ ಕಹೋ ನಾ ಪ್ಯಾರ್ ಹೈ ಮೂಲಕ ಬಾಲಿವುಡ್ಡಿಗೆ ಭರ್ಜರಿಯಾಗಿ ಹೃತಿಕ್ ಜೊತೆ ಕಾಲಿಟ್ಟ ಈ ಬೆಡಗಿ ಈ ಚಿತ್ರದಿಂದಾಗಿಯೇ ಸಾಕಷ್ಟು ಪ್ರಸಿದ್ಧಿ ಪಡದರು. ತನ್ನ ಗ್ಲ್ಯಾಮರ್ ಜೊತೆಗೆ ನಟನೆಯೂ ಗೊತ್ತಿದೆ ಎಂದು ಹಮ್‌ರಾಝ್, ಗದ್ದರ್ ಮತ್ತಿತರ ಚಿತ್ರಗಳ ಮನೋಜ್ಞ ಅಭಿನಯದ ಮೂಲಕ ತೋರಿಸಿ ಕೊಟ್ಟರು. ಆದರೆ ನಂತರದ ದಿನಗಳಲ್ಲಿ ಹೊಸ ಹೊಸ ನಟಿಯರ ಎಂಟ್ರಿ, ಖಾಸಗಿ ಜೀವನದ ವಿವಾದಗಳಿಂದ ಅಮಿಷಾ ವೃತ್ತಿ ಜೀವನ ಕೆಳಕ್ಕುರುಳಿತು. ಆಫರ್ ಇಲ್ಲ ಎಂಬ ಸ್ಥಿತಿ ಬಂತು. ಅಂಥ ಸಂದರ್ಭದಲ್ಲಿ ಅಮಿಷಾ 2008ರಲ್ಲಿ ಥೋಡಾ ಪ್ಯಾರ್ ತೋಡಾ ಮ್ಯಾಜಿಕ್ ಎಂಬ ಚಿತ್ರದಲ್ಲಿ ಬಿಕಿನಿಯಲ್ಲೂ ಕಾಣಿಸಿಕೊಂಡಳು. ಎಲ್ಲೋ, ಅಲ್ಲೊಂದು ಇಲ್ಲೊಂದು ಆಫರ್ ಮಾತ್ರ ಬರತೊಡಗಿತು. ಅಂಥ ಸಂದರ್ಭದಲ್ಲೀಗ ಅಮಿಷಾ ದಕ್ಷಿಣ ಭಾರತೀಯ ಚಿತ್ರಗಳೆಡೆಗೂ ಕಣ್ಣು ಹಾಕತೊಡಗಿದ್ದಾಳೆ. ಈಗಾಗಲೇ ತಮಿಳು ಹಾಗೂ ತೆಲುಗು ಚಿತ್ರಗಳಲ್ಲಿ ನಟಿಸಿ ಅನುಭವವಿರುವ ಅಮಿಷಾಗೆ ಇದು ಮೊದಲ ಕನ್ನಡ ಸಿನಿಮಾ. ಜೊತೆಗೆ ಭರ್ಜರಿ ಸಿನಿಮಾ ಕೂಡಾ. ಅಮಿಷಾಗೆ ಶುಭವಾಗಲಿ.