ಸಿತಾರಾ ಇತ್ತೀಚೆಗಷ್ಟೇ ನಾನು ನನ್ನ ಕನಸು ಚಿತ್ರದ ಮೂಲಕ ಕನ್ನಡಕ್ಕೆ ಮತ್ತೆ ಲಗ್ಗೆಯಿಟ್ಟಿದ್ದಾರೆ. 16 ವರ್ಷಗಳ ಹಿಂದೆ ಹಾಲುಂಡ ತವರು ಚಿತ್ರದ ಮೂಲಕ ಕನ್ನಡಿಗರ ಮನೆಮಾತಾದ ಈ ಮಲಯಾಳಿ ಬೆಡಗಿ ಸಿತಾರಾಗೆ ಈಗಲೂ ಕನ್ನಡಿಗರು ತನ್ನನ್ನು ನೆನಪಿಟ್ಟಿದ್ದಾರೆಂಬುದೇ ಆಶ್ಚರ್ಯದ ಸಂಗತಿಯಂತೆ!
ಹೌದು. ನನ್ನನ್ನು ಈಗಲೂ ಕನ್ನಡದ ಮಂದಿ ಇಷ್ಟಪಡುತ್ತಾರೆ ಎಂಬುದು ತಿಳಿದು ನಿಜಕ್ಕೂ ಖುಷಿಯಾಯ್ತು. ನನ್ನನ್ನಿನ್ನೂ ನೆನಪಿಟ್ಟುಕೊಂಡಿದ್ದಾರೆ ಎಂಬುದೇ ಆಶ್ಚರ್ಯ ಹಾಗೂ ಖುಷಿಯ ವಿಚಾರ ಎನ್ನುತ್ತಾರೆ ಸಿತಾರಾ.
ಅಂದಹಾಗೆ, ಸಿತಾರಾಗೆ ಈಗ 36ರ ಹರೆಯ. ಆದರೂ ಅದೇ 16 ವರ್ಷಗಳ ಹಾಲುಂಡ ತವರಿನಲ್ಲಿದ್ದಂತೆಯೇ ಸುಂದರವಾಗಿ ಕಾಣಿಸುತ್ತಾರೆ. ಅದೇನೇ ಇರಲಿ. ಇನ್ನೂ ಈ ಸಿತಾರಾಗೆ ಮದುವೆಯಾಗಿಲ್ಲವಂತೆ. ಸರಿಯಾದ ಗಂಡು ಸಿಕ್ಕರೆ ಖಂಡಿತ ಮದುವೆಯಾಗುತ್ತೇನೆ. ನನಗಿನ್ನೂ ಅಂಥ ಗಂಡೇ ಸಿಕ್ಕಿಲ್ಲ ಅನ್ನುತ್ತಾರೆ ಸಿತಾರಾ.
ರಾಜೇಂದ್ರ ಬಾಬು ನಿರ್ದೇಶನದ ಹಾಲುಂಡ ತವರು ಚಿತ್ರದ ಮೂಲಕ ಕನ್ನಡಕ್ಕೆ ಪಾದಾರ್ಪಣೆ ಮಾಡಿದ ಸಿತಾರಾ, ನಂತರ ತುಂಬ ಸಿನಿಮಾ ಮಾಡಿದರೂ, ಹಾಲುಂಡ ತವರನ್ನೇ ಜನ ಪದೇ ಪದೇ ನೆನಪಿಸುತ್ತಾರಂತೆ. ತಮಿಳು, ತೆಲುಗು, ಮಲಯಾಳಂ, ಕನ್ನಡದಲ್ಲಿ ನಟಿಸಿರುವ ಸಿತಾರಾಗೆ ಹಾಲುಂಡ ತವರು ಚಿತ್ರದ ಜ್ಯೋತಿ ಪಾತ್ರ ಅತ್ಯಂತ ಅಚ್ಚುಮೆಚ್ಚಂತೆ.
ನಾನು ನನ್ನ ಕನಸು ಚಿತ್ರಕ್ಕಾಗಿ ಮೊದಲು ಬೆಂಗಳೂರಿಗೆ ಬಂದಾಗ ಪತ್ರಕರ್ತರು 'ನಿಮಗೆ ಕನ್ನಡದಲ್ಲಿ ಮತ್ತೇನು ಅಸೆಯಿದೆ?' ಎಂದಿದ್ದಕ್ಕೆ 'ನಾನು ವಿಷ್ಣು ಜೊತೆ ಮತ್ತೆ ನಟಿಸಬೇಕು' ಎಂಬ ಆಸೆಯಿದೆ ಎಂದಿದ್ದೆ. ಆದರೆ ಹಾಗೆ ಹೇಳಿ ಮತ್ತೆ ನಾನು ಬೆಂಗಳೂರಿಗೆ ಬಂದಾಗ ವಿಷ್ಣು ನಮ್ಮ ಜೊತೆ ಇರಲಿಲ್ಲ ಎಂದು ಸಿತಾರಾ ಬೇಸರದಿಂದ ಹೇಳುತ್ತಾರೆ.
ನಾನು ನನ್ನ ಕನಸು ಚಿತ್ರದ ಬಗ್ಗೆ ಮಾತನಾಡುತ್ತಾ, ನನಗೂ ಅಂದು ನಾನು ನನ್ನ ಕನಸಿನಲ್ಲಿದ್ದಂತೆಯೇ ಒಬ್ಬ ಅಪ್ಪ ಇದ್ದರು. ಈಗ ಅಪ್ಪ ನನ್ನ ಜೊತೆ ಇಲ್ಲ. ಆದರೆ ಚಿತ್ರದಲ್ಲಿ ನಾನು ನಟಿಸುವಾಗಲೆಲ್ಲ ನನ್ನ ಅಪ್ಪ ನೆನಪಿಗೆ ಬರುತ್ತಿದ್ದರು ಎನ್ನುತ್ತಾರೆ. ಹಾಂ, ಅಂದಹಾಗೆ, ಸಿತಾರಾಗೆ ಬೇಗ ಕಂಕಣ ಭಾಗ್ಯ ಒಲಿಯಲಿ ಎಂದು ಹಾರೈಸೋಣ.