ಪರಭಾಷಾ ನಟಿಯರು ಕನ್ನಡಕ್ಕೆ ಬರುವುದು ಹೊಸದೇನಲ್ಲ. ಸಾಕಷ್ಟು ಜನ ಹೀಗೆ ಬಂದು ಹಾಗೆ ಹೋಗಿದ್ದಾರೆ. ಉಳಿದವರು ಬೆರಳೆಣಿಕೆಯಷ್ಟು ಮಾತ್ರ. ಇದೀಗ ಕನ್ನಡದಲ್ಲಿ ಸಾಕಷ್ಟು ಹೊಸ ಪ್ರತಿಭೆಗಳ ಆಗಮನ ಆಗುತ್ತಿದ್ದು, ಸದ್ಯ ದಕ್ಷಿಣ ಭಾರತದ ಜನಪ್ರಿಯ ನಟಿ ಇಲಿಯಾನಾ ಡೀ ಕ್ರೂಜ್ ಕನ್ನಡಕ್ಕೆ ಆಗಮಿಸುತ್ತಿದ್ದಾರೆ.
ಈಗಾಗಲೇ ಖುಷ್ಬು, ಜಯಪ್ರದಾ, ರಮ್ಯಕೃಷ್ಣ, ಮೀನಾ, ಇತ್ತೀಚೆಗೆ ಬಂದ ನಮಿತಾ, ಜೆನಿಲಿಯಾವರೆಗೆ ಸಾಕಷ್ಟು ಮಂದಿ ಕನ್ನಡಕ್ಕೆ ಬಂದು ಉತ್ತಮ ಚಿತ್ರ ನೀಡಿ ಹೋಗಿದ್ದಾರೆ. ಇದೀಗ ಇವರ ಸಾಲಿಗೆ ಇಲಿಯಾನಾ ಸಹ ಸೇರುತ್ತಿದ್ದಾರೆ. ತೆಲುಗು, ತಮಿಳು ಚಿತ್ರಗಳಲ್ಲಿ ಸಾಕಷ್ಟು ಪಡ್ಡೆ ಹುಡುಗರ ನಿದ್ದೆ ಕೆಡಿಸಿರುವ ಈಕೆ ಈಗ ಕನ್ನಡಿಗರ ಮನಕ್ಕೂ ಕನ್ನ ಹಾಕಲು ಬರುತ್ತಿದ್ದಾಳೆ.
ಅಭಿನಯಿಸುತ್ತಿರುವ ಚಿತ್ರದ ಹೆಸರು ತುಂಟ ತುಂಟಿ. ಇಂದ್ರಜಿತ್ ಲಂಕೇಶ್ ನಿರ್ದೇಶಿಸುತ್ತಿರುವ ಈ ಚಿತ್ರವನ್ನು ಸಂದೇಶ್ ನಾಗರಾಜ್ ನಿರ್ಮಿಸುತ್ತಿದ್ದಾರೆ. ಇಲಿಯಾನಾ ಜತೆ ನಟಿ ಸದಾ ಕೂಡ ಇರುತ್ತಾರಂತೆ. ಇವರು ಮಾತ್ರ ಅಲ್ಲ, ಇಷಿತಾ ಶರ್ಮ ಹಾಗೂ ಲೇಖಾ ವಾಷಿಂಗ್ಟನ್ ಸಹ ಬಳುಕಲಿದ್ದಾರಂತೆ. ಇವರೆಲ್ಲರ ನಡುವೆ ನಾಯಕರಾಗಿ ಧ್ಯಾನ್ ಇರುತ್ತಾರಂತೆ. ಜತೆಗೆ ಇನ್ನಿಬ್ಬರು ನಟಿಯರುಳ್ಳ ಚಿತ್ರದ ಹಾಡಿನ ಚಿತ್ರೀಕರಣ ಈಗಾಗಲೇ ಮುಗಿದು ಹೋಗಿದೆ. ಇಲಿಯಾನಾ ಇದರಲ್ಲಿ ಪಾಲ್ಗೊಂಡು ಈಗ ತವರಿಗೆ ಮರಳಿದ್ದಾರೆ.
ಒಟ್ಟಾರೆ ಇಲ್ಲೊಂದು ಅದೃಷ್ಟ ಪರೀಕ್ಷೆಗೆ ಮುಂದಾಗಿರುವ ಇಲಿಯಾನಾಗೆ ಉತ್ತಮ ಬೆಂಬಲ ನಿರೀಕ್ಷಿಸಲಾಗುತ್ತಿದೆ. ಚಿತ್ರದಲ್ಲಿ ಅವರ ಪಾತ್ರವೇನು? ಉಳಿದ ಮೂವರ ಪಾಲೇನು? ಎಂಬುದು ಇನ್ನೂ ತಿಳಿದಿಲ್ಲ. ಅದೇನೇ ಇರಲಿ ಚಿತ್ರ ಯಶಸ್ವಿಯಾಗಿ ಪ್ರದರ್ಶನಗೊಂಡು, ಎಲ್ಲರ ಮನಗೆಲ್ಲಲಿ ಎಂಬುದೇ ಆಶಯ.