ಮಠ ಹಾಗೂ ಎದ್ದೇಳು ಮಂಜುನಾಥ ನಂತರ ಸಾಕಷ್ಟು ಅವಕಾಶ ಕೇಳಿ ಬಂದರೂ ಅದನ್ನೆಲ್ಲಾ ನಯವಾಗಿ ತಿರಸ್ಕರಿಸಿದ ನಿರ್ದೇಶಕ ಗುರು ಪ್ರಸಾದ್ ಸದ್ಯ 'ಡೈರೆಕ್ಟರ್ ಸ್ಪೆಷಲ್' ಕೆಲಸದಲ್ಲಿ ತೊಡಗಿದ್ದಾರೆ.
ಗಾಂಧಿನಗರಕ್ಕೆ ಸಂಬಂಧಿಸಿದ ಈ ಚಿತ್ರದ ಕಥೆ ರಚನೆಯಲ್ಲಿ ಇವರು ತುಂಬಾ ಬ್ಯುಸಿಯಂತೆ. ಕತೆಗೆ ವಿಶೇಷ ರೂಪ ಕೊಡುತ್ತಿರುವ ಇವರು ಇದನ್ನು ತಮ್ಮ ಮೊದಲಿನ ಎರಡು ಚಿತ್ರಕ್ಕಿಂತ ಉತ್ತಮವಾಗಿ ಸಿದ್ಧಪಡಿಸಲು ಚಿಂತನೆ ನಡೆಸಿದ್ದಾರೆ. ಏಕೆಂದರೆ ನಿರ್ದೇಶಕನ ಕಾರ್ಯ ಮೇಲ್ಮುಖವಾಗಿರಬೇಕು. ಅದು ಒಮ್ಮೆ ಮೇಲೆ, ಇನ್ನೊಮ್ಮೆ ಕೆಳಗೆ ಇಳಿಯಬಾರದು ಎನ್ನುವುದು ಅವರ ಆಶಯ. ಮೇಲೇರಿ, ಕೆಳಗೆ ಬಿದ್ದು ಕೆಲಸ ಮಾಡುವ ನಿರ್ದೇಶಕರ ಪಟ್ಟಿಗೆ ತಮ್ಮನ್ನು ಸೇರಿಸಿಕೊಳ್ಳಲು ಸಹ ಇವರು ಇಚ್ಛಿಸುವುದಿಲ್ಲ.
ಕಥೆ ಏನು ಅಂತ ಕೇಳಿದ್ರೆ ಕೊಂಚ ಕನ್ನಡಕ ಸರಿಸಿಕೊಂಡು, ನೀವು ಯಾವ ಕಾಲದಲ್ಲಿ ಇದ್ದೀರಿ ಸ್ವಾಮಿ, ಕಥೆ ಅನ್ನುವುದಕ್ಕೆ ಇಂದು ಚಿತ್ರರಂಗದಲ್ಲಿ ಬೆಲೆ ಇಲ್ಲ. ಚಿತ್ರಕ್ಕೆ ಕಥೆ ಬರೆಯೋದು ಅನ್ನುವ ಸಿದ್ಧಾಂತವೇ ತಪ್ಪು. ಈಗೆಲ್ಲಾ ಹಾಲಿವುಡ್‌ನ ಅನುಕರಣೆ ಆಗುತ್ತಿದೆ. ಅಲ್ಲಿ ಕಥೆಗೆ ಬೆಲೆಯಿಲ್ಲ. ಅವರಂತೆ ನಾವು ಸಹ ಈಗ ಕಾನ್ಸೆಪ್ಟ್ ಮಾದರಿಗೆ ಶರಣು ಹೋಗಿದ್ದೇವೆ. ಮುಂದಿನ ದಿನಗಳಲ್ಲಿ ಇದೇ ಮುಖ್ಯವಾಗಿ ಜನಪ್ರಿಯವಾಗಲಿದೆ. ಎಲ್ಲರಿಗಿಂತ ಮೊದಲು ಈ ಪ್ರಯತ್ನ ನನ್ನಿಂದ ಆಗುತ್ತಿದೆ ಅಂತ ಹೇಳುತ್ತಿಲ್ಲ. ಆದರೆ ಗುರುತಾಗುವ ರೀತಿ ಅದನ್ನು ನಾನು ಮಾಡುತ್ತಿದ್ದೇನೆ ಎಂಬ ನೆಮ್ಮದಿ ಇದೆ ಎನ್ನುತ್ತಾರೆ ಗುರುಪ್ರಸಾದ್.
ಒಂದು ಯಶಸ್ವೀ ಚಿತ್ರ ಹುಟ್ಟಲು ವರ್ಷಗಳ ಶ್ರಮ ಹಿಡಿಸುತ್ತದೆ. ಮನಸ್ಸಿಗೆ ತೋಚಿದಂತೆ ಕಥೆ ಹೆಣೆಯಲು ಸಾಧ್ಯವಿಲ್ಲ. ಬೇಕಾಬಿಟ್ಟಿ ಬರೆದು ಅದಕ್ಕೆ ಸುಣ್ಣ ಬಣ್ಣ ಬಳಿದರೆ ಅದು ಗಾಂಧೀನಗರದ ಮಾಮೂಲಿ ಸಿನಿಮಾ ಆಗುತ್ತದೆ. ನನ್ನ ಒಂದು ಚಿತ್ರ ಇದ್ದ ರೀತಿ ಇನ್ನೊಂದು ಇರುವುದಿಲ್ಲ. ಒಂದಕ್ಕಿಂತ ಒಂದು ಭಿನ್ನವಾಗಿರುತ್ತದೆ. ಇದು ಹೊಗಳಿಕೆಗೆ ಹೇಳಿಕೊಳ್ಳುತ್ತಿರುವ ಮಾತಲ್ಲ. ಸದ್ಯ ಹೊಸ ಹುಡುಗರನ್ನು ಇಟ್ಟುಕೊಂಡು ಡೈರೆಕ್ಟರ್ಸ್ ಸ್ಪೆಷಲ್ ಮಾಡುತ್ತಿದ್ದೇನೆ ಎನ್ನುತ್ತಾರೆ.
ನನ್ನ ಬಗ್ಗೆ ಒಂದೇ ವಾಕ್ಯದಲ್ಲಿ ಹೇಳಿಕೊಳ್ಳಬೇಕು ಅಂದರೆ "ನೊಣ ಎಲ್ಲಾ ಕಡೆ ಕೂರುತ್ತೆ. ಜೇನು ನೊಣ ಕೆಲವು ಕಡೆ ಮಾತ್ರ ಇರುತ್ತೆ. ನಾನು ಎರಡನೇ ದರ್ಜೆಗೆ ಸೇರುತ್ತೇನೆ!' ಎನ್ನುತ್ತಾರೆ