ಕೋಮಲ್ ಕನ್ನಡ ಚಿತ್ರರಂಗದ ಗೆಲುವಿನ ಕುದುರೆ. ಹಾಗೆಯೇ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಹಲವು ಚಿತ್ರಗಳನ್ನು ಮಾಡಿದ್ದರೂ, ಸೋಲಿನ ಸರದಾರಿಣಿ. ಇದೀಗ ಅವರೂ ಗೆದ್ದೆತ್ತಿನ ಬಾಲ ಹಿಡಿದಿದ್ದಾರೆ. ಗಂಭೀರ ಚಿತ್ರಗಳ ಸಾಲಿನಿಂದ ಆಚೆ ಬಂದು, ಕೋಮಲ್ ಕೈ ಹಿಡಿದು ನಗಲು ಹಾಗೂ ಜನರನ್ನು ನಗಿಸಲು ಹೊರಟಿದ್ದಾರೆ.
ಇವರಿಬ್ಬರ ಕಾಂಬಿನೇಷನ್‌ನಲ್ಲಿ ಮೂಡಿ ಬರುತ್ತಿರುವ ಚಿತ್ರ 'ವಾರೆವ್ಹಾ...'. ಸಾಕಷ್ಟು ನಿರೀಕ್ಷೆಯೊಂದಿಗೆ ಈ ಚಿತ್ರ ಸಿದ್ಧಪಡಿಸುತ್ತಿರುವ ವಿಜಯಲಕ್ಷ್ಮಿ ಸಿಂಗ್ ಮೊನ್ನೆ ಮೊನ್ನೆ ಇದರ ಬಗ್ಗೆ ಮಾಹಿತಿ ಕೊಡಲು ಪತ್ರಿಕಾಗೋಷ್ಠಿಯನ್ನೇ ಕರೆದಿದ್ದರು.
ಇದು ಇಂಗ್ಲಿಷ್‌ನ 'ವಾಟ್ ವುಮೆನ್ ವಾಂಟ್' ಚಿತ್ರದ ಒಂದು ಎಳೆಯನ್ನು ಇರಿಸಿಕೊಂಡು ಸಿದ್ಧಪಡಿಸಿದ ಚಿತ್ರವಂತೆ. ನಮ್ಮ ನೆಲ, ಜಲ ಹಾಗೂ ಸ್ಥಳೀಯತೆಗೆ ತಕ್ಕಂತೆ ಕಥೆಯಲ್ಲಿ, ಚಿತ್ರದಲ್ಲಿ ಕೆಲ ಮಾರ್ಪಾಡು ಮಾಡಲಾಗಿದೆಯಂತೆ. ಹೀಗಾಗಿ ಇದು ಯಥಾವತ್ ರಿಮೇಕ್ ಅಲ್ಲ.
ಇದೊಂದು ಪಕ್ಕಾ ಕಾಮಿಡಿ ಚಿತ್ರ! ಈಗಾಗಲೇ ಒಂದು ಚಿತ್ರದಲ್ಲಿ ನಾಯಕರಾಗಿದ್ದ ಕೋಮಲ್ ಈಗ ಇನ್ನೊಮ್ಮೆ ನಾಯಕ. ಈ ಚಿತ್ರದಲ್ಲಿ ಪುರುಷ ಪಾತ್ರಕ್ಕೆ ಪ್ರಾಧಾನ್ಯವಿಲ್ಲವಂತೆ. ಮಹಿಳಾ ಪಾತ್ರಗಳೇ ಚಿತ್ರವಿಡೀ ಮಿಂಚುತ್ತವೆ ಎಂದು ಹೇಳಲಾಗುತ್ತಿದೆ. ಸುಮಾರು ನಲವತ್ತಕ್ಕೂ ಹೆಚ್ಚು ಹುಡುಗಿಯರು ಕೋಮಲ್ ಜತೆ ಕುಣಿಯಲಿದ್ದಾರೆ ಅಂದರೆ ನೀವೇ ಊಹಿಸಿಕೊಳ್ಳಿ. ಇನ್ನೊಂದು ವಿಶೇಷ ಅಂದರೆ ಈ ಚಿತ್ರದಲ್ಲಿ ಐದು ವರ್ಷದ ಹುಡುಗಿಯಿಂದ ಹಿಡಿದು, ಅರುವತ್ತರ ಗಡಿ ದಾಟಿರುವ ಅಜ್ಜಿಯ ಜತೆಗೂ ಕೋಮಲ್ ಇರುತ್ತಾರೆ. ಬರುತ್ತಾರೆ, ಹೋಗುತ್ತಾರೆ.
ತಂಗಿ, ಲವರ್, ಹೆಂಡತಿ, ತಾಯಿ, ಮನೆ ಕೆಲಸದಾಕೆ, ಹೀಗೆ ಹತ್ತಾರು ಬಗೆಯ ಹೆಣ್ಣುಗಳ ಒಡನಾಡಿ ಭಾವನೆಗಳ ಜತೆ ಮಾತುಕತೆ ನಡೆಸುವ ಕಾರ್ಯ ಇವರದ್ದಂತೆ. ಒಟ್ಟಾರೆ ಕೋಮಲ್ ಇದ್ದೂ ಇದೊಂದು ಲೇಡೀಸ್ ಸ್ಪೆಷಲ್ ಚಿತ್ರ.