ನಿಮಗೆ ಶ್ರೀಧರ್ ವಿ. ಸಂಭ್ರಮ್ ಗೊತ್ತಿದೆಯಾ? ಯಾರು ಅಂತ ಕೇಳುವುದು ಸಹಜ. ಹೌದು ಸ್ವಾಮಿ ಅವರೇ ನಮ್ಮ ಮುಸ್ಸಂಜೆ ಮಾತು ಚಿತ್ರದಲ್ಲಿ ಮೆಲೋಡಿ ಸಂಗೀತ ನೀಡಿ ರಾಜ್ಯಾದ್ಯಂತ ಹೆಸರು ಮಾಡಿದ್ದ ಪ್ರತಿಭೆ ವಿ. ಶ್ರೀಧರ್.
ಇದ್ಯಾಕೆ ಹೆಸರು ಹೀಗಾಯಿತು ಅಂತ ಕೇಳಿದರೆ, 'ಮೊದಲ ಚಿತ್ರವೇ ಗೆದ್ದು, ಸಂಭ್ರಮ ತಂದುಕೊಟ್ಟಿತಲ್ಲಾ ಅದಕ್ಕೆ!' ಅಂತ ಚುಟುಕಾಗಿ ಉತ್ತರಿಸುತ್ತಾರೆ.
ಸದ್ಯ ಕೃಷ್ಣನ್ ಲವ್ ಸ್ಟೋರಿಯ ಕನವರಿಕೆಯಲ್ಲಿರುವ ಇವರು, ಮುಸ್ಸಂಜೆ ಮಾತು ನಂತರ ದುಬೈ ಬಾಬು, ಇನಿಯಾ, ಸ್ಕೂಲ್ ಮಾಸ್ಟರ್‌ಗೆ ಸಂಗೀತ ನೀಡಿದ್ದರು. ಇವ್ಯಾವುವೂ ಅಷ್ಟು ಹೆಸರು ತಂದುಕೊಡಲಿಲ್ಲ.
ಆದರೂ ದುಬೈ ಬಾಬುದಲ್ಲಿ ಮಾಸ್ ಅಂಡ್ ಲವ್ ಹಾಡು, ಇನಿಯನಲ್ಲಿ ಡ್ಯೂಯೆಟ್ ಹಾಗೂ ಸ್ಕೂಲ್ ಮಾಸ್ಟರ್‌ನಲ್ಲಿ ಎಲ್ಲಾ ವರ್ಗದ ಪ್ರೇಕ್ಷಕರನ್ನೂ ಮೆಚ್ಚಿಸಿದ ಇವರು ಇದೀಗ ಗೆಲುವಿನ ಸಂಭ್ರಮದಲ್ಲಿ ಇದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಮೃದಂಗ, ಸಂಗೀತ ಕಲಿಕೆ ಮಾಡಿಕೊಂಡಿರುವ ಇವರು, ಪಾಶ್ಚಿಮಾತ್ಯ ಸಂಗೀತ ಸೇರಿದಂತೆ ಚಿತ್ರ ರಂಗದ ಹಲವು ವಿಧದ ಸಂಗೀತವನ್ನು ಹಂಸಲೇಖ, ವಿ. ಮನೋಹರ್, ಕೆ. ಕಲ್ಯಾಣ್, ರಾಜೇಶ್ ರಾಮನಾಥ್ ಮುಂತಾದವರಿಂದ ಕಲಿತಿದ್ದಾರೆ. ಶಿಕ್ಷಣವನ್ನು ಅರ್ಧಕ್ಕೆ ಕೈಬಿಟ್ಟು, ಸಂಗೀತ ಕಲಿಯಲು ಬಂದಿರುವ ಇವರಿಗೆ ಇದೇ ಇಂದು ಜೀವನ. ಇಲ್ಲಿ ಸಾಕಷ್ಟು ಯಶ ಸಿಗಲಿ ಅಂತ ಆಶಿಸೋಣ.