ಅನುಭವಕ್ಕಿಂತ ದೊಡ್ಡ ಗುರು ಇನ್ನೊಬ್ಬರಿಲ್ಲ. ಹೀಗಾಗಿ ಇಂದಿನ ಚಿತ್ರರಂಗದ ಹಿರಿಯರು, ಕಿರಿಯನ್ನು ಕೂರಿಸಿಕೊಂಡು ಸಭೆ ನಡೆಸಿ ಜನರಿಗೆ ಯಾವ ಮಾದರಿಯ ಚಿತ್ರ ಬೇಕು ಎಂಬುದನ್ನು ಚರ್ಚಿಸಿ ಚಿತ್ರಗಳನ್ನು ನಿರ್ಮಿಸಬೇಕು ಎಂದು ಹಿರಿಯ ಚಿತ್ರಕರ್ಮಿ ಕೆ.ಸಿ.ಎನ್. ಚಂದ್ರು ಅಭಿಪ್ರಾಯ ಪಡುತ್ತಾರೆ.
ಬಟ್ಟೆ ವ್ಯಾಪಾರಿಯಾಗಿದ್ದವರು ಚಿತ್ರ ರಂಗಕ್ಕೆ ಬಂದು ನಿರ್ಮಾಪಕ ಹಾಗೂ ವಿತರಕರಾಗಿ 'ಬಂಗಾರದ ಮನುಷ್ಯ', 'ಬಬ್ರುವಾಹನ', 'ಶರಪಂಜರ', 'ಕಸ್ತೂರಿ ನಿವಾಸ', 'ಹುಲಿ ಹಾಲಿನ ಮೇವು', 'ಭಲೇ ಜೋಡಿ' ಮುಂತಾದ ಚಿತ್ರಗಳನ್ನು ನಿರ್ಮಿಸಿರುವ ಇವರು, ಇತ್ತೀಚಿನ ಚಿತ್ರಗಳು ಸೋಲುತ್ತಿರುವಲ್ಲಿ ಹಿರಿ ಕಿರಿಯರು ಒಂದಾಗದಿರುವುದು ಕಾರಣ ಎನ್ನುತ್ತಿದ್ದಾರೆ.
ಕನ್ನಡ ಚಿತ್ರರಂಗದ ಇಂದಿನ ಸ್ಥಿತಿ ಗತಿಯ ಬಗ್ಗೆ ಅಧ್ಯಯನ ಆಗಬೇಕಿದೆ. ಇದಕ್ಕಾಗಿ ಚಿತ್ರರಂಗದ ಎಲ್ಲಾ ವಿಭಾಗದವರೂ ತಮ್ಮೊಳಗಿನ ವೈಮನಸ್ಸು ಮರೆತು ಒಂದಾಗಬೇಕಿದೆ. ಎಲ್ಲರೂ ಒಂದಾಗದೇ, ಸಮಸ್ಯೆಗೆ ಸರಳ ಪರಿಹಾರ ಸಿಗಲು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ.
ಡಾ. ರಾಜ್ ಕುಮಾರ್ ಅಂದರೆ ಗೌಡರಿಗೆ ಅದೇಕೋ ಅಪಾರ ಪ್ರೀತಿ. ರಾಜ್ ಕುಮಾರ್ ನಮ್ಮನ್ನು ಅನ್ನದಾತರು ಅಂತ ಕರೆಯುತ್ತಿದ್ದರು. ಇಂತ ಮಾತು ಸಿಕ್ಕರೆ, ವಜ್ರ, ವೈಢೂರ್ಯವನ್ನೇ ಕೊಟ್ಟಷ್ಟು ಸಂತೋಷ ನಮ್ಮಂತವರಿಗೆ. ಆದರೆ ಇಂದಿನವರಲ್ಲಿ ಆ ಭಾವನೆ ಇರುವುದು ಕಡಿಮೆ. ಚಿತ್ರದ ಯಶಸ್ಸಿಗೆ ಅಂದು ಪ್ರತಿಯೊಬ್ಬ ನಿರ್ಮಾಪಕರು ಸ್ಕ್ರಿಪ್ಟ್ ಹಿಡಿದು ಅಲ್ಲಿ ಇಲ್ಲಿ ಅಲೆಯುತ್ತಿದ್ದರು. ಆದರೆ ಇಂದು ತಮ್ಮ ಮಗ ಹೀರೋ ಆಗಬೇಕು, ಅಳಿಯ ನಟನಾಗಬೇಕು ಎಂದು ಅಲೆದಾಡುತ್ತಿದ್ದಾರೆ. ಹೀಗಾದರೆ ಚಿತ್ರರಂಗ ಉದ್ಧಾರ ಆಗಲು ಹೇಗೆ ಸಾಧ್ಯ ಎನ್ನುತ್ತಾರೆ.
ಚಿತ್ರರಂಗದಲ್ಲಿ ಇಂದು ಪೈರಸಿ ಕಾಟ ವಿಪರೀತವಾಗಿದೆ. ಬಹುಬೆಲೆ ಹೂಡಿ ಚಿತ್ರ ನಿರ್ಮಿಸಿ, ಥಿಯೇಟರಿನಲ್ಲಿ ಬಿಡುಗಡೆ ಮಾಡಿದ ಕೆಲವೇ ಗಂಟೆಯಲ್ಲಿ ಚಿತ್ರದ ನಕಲಿ ಸಿಡಿ ಮಾರುಕಟ್ಟೆ ಪ್ರವೇಶಿಸಿ ಬಿಟ್ಟಿರುತ್ತದೆ. ಕೇವಲ 10 ರೂ.ಗೆ ಸಿಗುವ ಸಿಡಿಯನ್ನು ಜನ ಕೊಂಡುಕೊಳ್ಳುತ್ತಾರೆ. ಚಿತ್ರ ಮಂದಿರಕ್ಕೆ ಬರುವುದೇ ಇಲ್ಲ. ಅಲ್ಲಿಗೆ ನಂಬಿ ಹಣ ಹೂಡಿದವರು ಬೀದಿಗೆ ಬೀಳುತ್ತಾರೆ. ಸರಕಾರ ಇದಕ್ಕೆ ಒಂದು ಕ್ರಮ ಕೈಗೊಳ್ಳದೇ ಹೋದರೆ, ಮುಂದೆ ಹೂಡಿಕೆ ಮಾಡಲು ಸಹ ಜನ ಸಿಗುವುದಿಲ್ಲ ಎನ್ನುತ್ತಾರೆ ಆತಂಕದಿಂದ.
ಒಟ್ಟಾರೆ ಹಿಂದಿದ್ದ ಕಳಕಳಿ, ಆಶಯ ಹಾಗೂ ಚಿತ್ರ ನಿರ್ಮಿಸುವ ಕಾಳಜಿ ಇಂದಿನವರಲ್ಲಿ ಉಳಿದಿಲ್ಲ. ಸ್ವಾರ್ಥಕ್ಕೆ ಚಿತ್ರಗಳು ಬಲಿಯಾಗುತ್ತಿವೆ. ಜನರಿಗೆ ಇಷ್ಟವಾಗುವ ಚಿತ್ರ ನೀಡದಿದ್ದರೆ ಉಳಿಗಾಲ ಇಲ್ಲ ಎಂದು ಇವರು ಮಾರ್ಮಿಕವಾಗಿ ನುಡಿಯುವುದು ನಿಜಕ್ಕೂ ಸತ್ಯ ಅನ್ನಿಸುತ್ತದೆ. ತಿಳಿದುಕೊಳ್ಳುವವರು ತಿಳಿದುಕೊಂಡರೆ ಅಷ್ಟೇ ಸಾಕು.