ಕ್ರೀಡಾಂಗಣದಲ್ಲಿ ಸಾಕಷ್ಟು ಸಾರಿ ನಾವು ಗೆದ್ದು ಬಾ ಇಂಡಿಯಾ ಎಂದು ಅರಚಿದ್ದೇವೆ. ಇಂಥ ಕ್ರೀಡಾಭಿಮಾನ ಹೊಂದಿನ ಸಿನಿಮಾಗಳನ್ನೂ ನೋಡಿದ್ದೇವೆ. ಆದರೆ ಅವೆಲ್ಲಾ ಹಿಂದಿ ಹಾಗೂ ಅನ್ಯ ಭಾಷೆಯ ಚಿತ್ರಗಳಲ್ಲಿ. ಇದೀಗ ಕನ್ನಡದಲ್ಲೂ ನಾವು ಕಿರುಚುವ ಅವಕಾಶ ಕೂಡಿ ಬಂದಿದೆ.
ಹೌದು. ಕನ್ನಡಕ್ಕೆ ಡಯಾನಾ ಬರುತ್ತಿದ್ದಾಳೆ. ಇದೇನು ಕ್ರೀಡಾಭಿಮಾನಕ್ಕೂ, ರಾಜಕುಮಾರಿ ಡಯಾನಗೂ ಏನು ಸಂಬಂಧ ಅಂತ ಅಂದುಕೊಂಡಿರಾ? ಇದೆ, ಈಕೆ ರಾಜಕುಮಾರಿ ಡಯಾನಾ ಅಂತೂ ಖಂಡಿತಾ ಅಲ್ಲ. ಕನ್ನಡದ ಕ್ರೀಡಾಪಟು ಡಯಾನಾ. ಹಾಗಾದರೆ ಇದು ಕ್ರೀಡಾ ಸುದ್ದಿ, ಸಿನಿಮಾ ಕಾಲಂಗೆ ಹೇಗೆ ಬಂತು ಅಂತ ಕೇಳುತ್ತಿದ್ದೀರಾ? ತಾಳ್ಮೆ ಓದುಗರೇ ತಾಳ್ಮೆ..!
ಡಯಾನಾ ಅನ್ನುವ ಹೆಸರಿನ ಚಿತ್ರವೊಂದು ಕನ್ನಡದಲ್ಲಿ ನಿರ್ಮಾಣವಾಗುತ್ತಿದೆ. ಇದೊಬ್ಬ ಕ್ರೀಡಾಪಟುವಿನ ಜೀವನ ಆಧರಿಸಿದ ಕತೆಯಂತೆ. ಡಯಾನಾ ಒಲಂಪಿಕ್ ಕ್ರೀಡಾಕೂಟಕ್ಕೆ ತೆರಳಿದಾಗ ಅನುಭವಕ್ಕೆ ಸಂಬಂಧಿಸಿದ ಕಥೆಯಂತೆ. ಕವಿರಾಜೇಶ್ ಎಂಬುವರು ಚಿತ್ರದ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಕೂಡಾ ಇವರದ್ದೇ ಅಂತೆ. ನಿರ್ಮಾಣವನ್ನೂ ಇವರೇ ಹೊತ್ತುಕೊಂಡಿದ್ದಾರೆ. ಆದರೆ, ಚಿತ್ರದ ನಾಯಕರಂತೂ ಇವರಲ್ಲ. ದ್ರುವ ಈ ಪಾತ್ರ ಮಾಡಲಿದ್ದಾರೆ. ಇಬ್ಬರು ನಾಯಕಿಯರು ಇದ್ದಾರೆ ಅಂತ ಕೇಳಿ ಬರುತ್ತಿದೆ. ಎ.ಟಿ. ರವೀಶ್ ಸಂಗೀತ ನೀಡಿದ್ದು, ಚೌಹಾಣ್ ಛಾಯಾಗ್ರಹಣವಿದೆಯಂತೆ.