ದರ್ಶನ್ ದ್ವಿಪಾತ್ರದಲ್ಲಿ ನಟಿಸುತ್ತಿರುವ ಬಾಸ್ ಚಿತ್ರದ ಆಡಿಯೋ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಸದ್ಯದಲ್ಲೇ ಧ್ವನಿ ಸುರುಳಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕ ರಮೇಶ್ ಯಾದವ್ ತಿಳಿಸಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರು. ನವ್ಯನಾಯರ್ ಹಾಗೂ ರೇಖಾ ನಾಯಕಿಯಾಗಿ ನಟಿಸಿದ್ದಾರೆ. ಈ ಮೊದಲು ಗಜ ಚಿತ್ರದಲ್ಲಿ ದರ್ಶನ್ ಜೊತೆ ನಾಯಕಿಯಾಗಿ ನಟಿಸಿದ್ದ ನವ್ಯಾರಿಗೆ ಇನ್ನೊಂದು ಅಗ್ನಿ ಪರೀಕ್ಷೆಯಾಗಿದೆ. ಗಜ ಚಿತ್ರದಲ್ಲಿ ಐತಲಕ್ಕಡಿ ನೃತ್ಯದ ಮೂಲಕ ಕನ್ನಡ ಚಿತ್ರರಂಗದಲ್ಲಿ ಮನೆ ಮಾತಾಗಿರುವ ನವ್ಯರಿಗೆ ಈ ಮೂಲಕ ಮಿಂಚಲು ಮತ್ತೊಂದು ಅವಕಾಶ ಬಂದಿದೆ.
ಚಿತ್ರವನ್ನು ರಘುರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಶಿವಾಜಿ ಪ್ರಭು, ರಂಗಾಯಣ ರಘು, ಸುಮಿತ್ರ, ಬುಲೆಟ್ ಪ್ರಕಾಶ್, ಉಮಾಶ್ರೀ ಮೊದಲಾದವರು ತಾರಾಬಳಗದಲ್ಲಿದ್ದಾರೆ.