ಹೆಂಡ್ತೀರ್ ದರ್ಬಾರ್ ಮುಗಿಸಿರುವ ನಟ ರಮೇಶ್ ಕೊಂಚ ನಿರಾಳವಾದಂತೆ ಕಾಣಿಸುತ್ತಿದ್ದಾರೆ. ಇದರ ಜೊತೆ ಇವರ ಪ್ರೀತಿಯಿಂದ ರಮೇಶ್ ಸಹ ಕೊಂಚ ಓಡುತ್ತಿರುವಂತೆ ಭಾಸವಾಗುತ್ತಿದೆ. ಹೀಗಾಗಿ ರಮೇಶ್ ಫುಲ್ ಖುಶ್.
ಹೆಂಡ್ತೀರ ದರ್ಬಾರಿನಲ್ಲಿ ಸಾಮಾನ್ಯ ವರ್ಗದ ಪತಿರಾಯನ ಪಾತ್ರವಂತೆ. ಗಂಡನ ಸಂಬಳಕ್ಕೆ ಮೀರಿನ ಹೆಂಡ್ತೀರ ಬೇಡಿಕೆಯಿಂದ ಎದುರಾಗುವ ಪಚೀತಿಯೇ ಚಿತ್ರದ ಜೀವಾಳ. ಹಾಸ್ಯದ ಗಾಢ ಲೇಪನ ಸಹ ಇದಕ್ಕಿದೆಯಂತೆ. ಒಟ್ಟಾರೆ ಮತ್ತೊಂದು ಹಾಸ್ಯ ಚಿತ್ರವಾಗಿ ಇದು ರಂಜಿಸಿ ಹೆಸರು ಮಾಡುವಲ್ಲಿ ಸಂಶಯವಿಲ್ಲ ಅನ್ನುತ್ತಾರೆ ರಮೇಶ್ ಪ್ರೀತಿಯಿಂದ.
ಹಾಗಂತ ಈ ಮಾದರಿಯ ಸಾಕಷ್ಟು ಚಿತ್ರಗಳು ಕನ್ನಡದಲ್ಲಿ ಬಂದು ಹೋಗಿವೆ. ಆದರೆ ಈ ಚಿತ್ರದಲ್ಲಿ ನಿರ್ದೇಶಕರು ವಿಭಿನ್ನ ನಿರ್ದೇಶನದ ಮೂಲಕ ವೈಶಿಷ್ಠ್ಯ ಮೆರೆದಿದ್ದಾರೆ ಎನ್ನುವುದನ್ನೂ ಅವರು ಮರೆಯುವುದಿಲ್ಲ.
ಪ್ರೀತಿಯಿಂದ ರಮೇಶ್ ಬಗ್ಗೆ ಹೇಳುವುದಾದರೆ ಎಲ್ಲಾ ಚಿತ್ರ ಮಂದಿರಗಳಲ್ಲೂ ಓಡುತ್ತಿದೆ. ಪಿವಿಆರ್ ಚಿತ್ರ ಮಂದಿರದಲ್ಲೂ ಇದಕ್ಕೆ ಉತ್ತಮ ಪ್ರತಿಕ್ರಿಯೆ ಇದೆ ಎನ್ನುತ್ತಾರೆ. ಈ ಚಿತ್ರ ಕೊಂಚ ಹೈಟೆಕ್ ಕಥೆ ಆಧರಿಸಿದೆ. ಇಂದು ಸಾಮಾನ್ಯರಿಗೂ ಸರಳವಾಗಿ ಜೀರ್ಣವಾಗುವ ರೀತಿ ಇದು ಸಿದ್ಧವಾಗಿದೆ. ಜನ ಇಂದು ಈ ಚಿತ್ರದ ಮೂಲಕ ಸಾಕಷ್ಟು ಮನರಂಜನೆ ಪಡೆಯುತ್ತಿದ್ದಾರೆ ಎನ್ನುತ್ತಾರೆ.
ಇತ್ತೀಚೆಗೆ ನನ್ನ ಕೆಲವು ಚಿತ್ರಗಳು ಸಾಲು ಸಾಲಾಗಿ ಸೋತಿವೆ, ನಿಜ. ಆದರೆ ಪ್ರತಿ ಚಿತ್ರಕ್ಕೂ ಶ್ರಮವನ್ನು ತೊಡಗಿಸಿದ್ದೇನೆ. ಉತ್ತಮ ಅಭಿನಯವನ್ನೇ, ವಿಭಿನ್ನ ರೀತಿಯಲ್ಲಿ ನೀಡಿದ್ದೇನೆ. ಸೋಲು-ಗೆಲುವು ಚಿತ್ರರಂಗದಲ್ಲಿ ಸಾಮಾನ್ಯ. ಮುಂದೆ ಸಾಗುವುದು ನನ್ನ ಗುರಿ, ನಡೆಯುವಾಗ ಎಡವುದು ಸಹಜ ಎನ್ನುತ್ತಾರೆ ರಮೇಶ್. ಹೆಂಡ್ತೀರ ದರ್ಬಾರಿನಲ್ಲೂ ರಮೇಶ್‌ಗೆ ಯಶಸ್ಸು ಸಿಗಲಿ ಎಂದು ಹಾರೈಸೋಣ.