ಈ ಶತಮಾನದ ವೀರ ಮದಕರಿ ಹಿಟ್ ಆದ ಬಳಿಕ ಕನ್ನಡ ಚಿತ್ರರಂಗದಲ್ಲಿ ಬಹು ಬೇಡಿಕೆಯ ನಟಿಯಾಗಿದ್ದು ರಾಗಿಣಿಗೆ ಒಂದೆಡೆ ಹುಟ್ಟುಹಬ್ಬದ ಸಂಭ್ರಮವಾದರೆ, ಇನ್ನೊಂದೆಡೆ, ಬಹು ನಿರೀಕ್ಷಿತ ಶಂಕರ್ ಐಪಿಎಸ್ ಚಿತ್ರವೂ ಬಿಡುಗಡೆಗೊಂಡಿದೆ. ಚಿತ್ರದ ಬಗ್ಗೆ ಎಲ್ಲೆಡೆ ಉತ್ತಮ ಅಭಿಪ್ರಾಯ ಕೇಳಿ ಬರುತ್ತಿರುವುದು ರಾಗಿಣಿಯ ಉತ್ಸಾಹಕ್ಕೆ ಕೊನೆ ಮೊದಲೇ ಇಲ್ಲವಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬ ರಾಗಿಣಿ ಪಾಲಿಗೆ ಬ್ಯುಸಿ, ಸಂತೋಷಮಯ ಸಂಭ್ರಮ.
ಈಕೆಯ ಅಭಿನಯದ ಹೋಳಿ, ಗಂಡೆದೆ ಮತ್ತು ನಾಯಕ ಚಿತ್ರಗಳು ತೆರೆಗೆ ಸಜ್ಜಾಗಿದೆ. ವಿಜಯ್ ಅಭಿನಯದ ಇನ್ನೊಂದು ಚಿತ್ರ ವೀರಬಾಹುಗೂ ಈಕೆಯೇ ನಾಯಕಿ. ಇದಲ್ಲದೆ, ಕನಸುಗಾರ ಕರಣ್ ನಿರ್ದೇಶನದ ಪಾನಿಪುರಿ ಚಿತ್ರಕ್ಕೂ ರಾಗಿಣಿ ಸಹಿ ಹಾಕಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಕೆನ್ನೆಗುಳಿಯ ದಿಗಂತ್ ನಟಿಸುತ್ತಿದ್ದಾರೆ. ಸದ್ಯಕ್ಕೆ ರಾಗಿಣಿ ಕೈಯಲ್ಲಿ ಸಾಕಷ್ಟು ಚಿತ್ರಗಳು ಇರುವುದರಿಂದ ಡೇಟ್ಸ್ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ. ಆದರೆ ಅದನ್ನೆಲ್ಲಾ ಬಗೆಹರಿಸಿಕೊಂಡು ಚಿತ್ರದಲ್ಲಿ ನಟಿಸುವುದಾಗಿ ರಾಗಿಣಿ ಹೇಳುತ್ತಾರೆ.
PR
ಶಂಕರ್ ಐಪಿಎಸ್ ಚಿತ್ರದಲ್ಲಿರುವ ವಿಜಯ್ ದೇಹಸಿರಿಯನ್ನು ಸಕತ್ ಹಾಟ್ ಆಗಿಯೇ ತೋರಿಸುವ ಮೈ ಬಿಸಿಯೇರಿಸುವ ಹಾಡಿಗೆ ವಿಜಯ್ ಜೊತೆ ರಾಗಿಣಿ ಹೆಜ್ಜೆಹಾಕಿರುವುದು ಕೂಡಾ ಸಾಕಷ್ಟು ಸುದ್ದಿ ಮಾಡುತ್ತಿದೆ. ಈ ಹಾಡು ಕೊಂಚ ವಲ್ಗರ್ ಆಗಿದೆ ಎಂಬ ಆರೋಪವನ್ನು ತಳ್ಳಿ ಹಾಕುವ ರಾಗಿಣಿ, ಆ ಹಾಡು ವಲ್ಗರ್ ಆಗಿಲ್ಲ. ಹಾಡನ್ನು ತುಂಬ ಡಿಫರೆಂಟ್ ಆಗಿ ನಿರೂಪಿಸಲಾಗಿದೆ. ನನ್ನ ಪ್ರಕಾರ ಇದೊಂದು ಸ್ಟೈಲಿಷ್ ಹಾಡು. ಈ ಹಾಡಿನಲ್ಲಿ ನಾನು ಕಾಣಿಸಿಕೊಂಡಿರುವ ಬಗ್ಗೆ ನನಗೇನೂ ಮುಜುಗರವಿಲ್ಲ ಎನ್ನುತ್ತಾರೆ ರಾಗಿಣಿ.
ಗ್ಲ್ಯಾಮರಸ್ ಆಗಿರೋದು ನನ್ನಿಷ್ಟ. ರಾಗಿಣಿ ಎಲ್ಲಿರುತ್ತಾಳೋ ಅಲ್ಲಿ ಗ್ಲ್ಯಾಮರ್ ಕೂಡಾ ಇದ್ದೇ ಇರುತ್ತದೆ. ರಾಗಿಣಿ ಹಾಗೂ ಗ್ಲ್ಯಾಮರ್ ಒಂದಕ್ಕೊಂದು ಸಮಾನಾರ್ಥಕ ಪದಗಳು ಎಂದು ಪಕ್ಕಾ ಆತ್ಮವಿಶ್ವಾಸದಿಂದ ಉಲಿಯುತ್ತಾಳೆ ರಾಗಿಣಿ. ಜೊತೆಗೆ ಗ್ಲ್ಯಾಮರ್ ಅನ್ನೋದು ಕೇವಲ ದೇಹಸಿರಿಯ ಪ್ರದರ್ಶನವಲ್ಲ. ಅದು ಆ ವ್ಯಕ್ತಿಯ ಆತ್ಮವಿಶ್ವಾಸವೂ ಕೂಡಾ. ನನಗೆ ಬರೀ ಗ್ಲ್ಯಾಮರ್ ಮಾತ್ರವಲ್ಲ, ನಟನೆಯೂ ಗೊತ್ತು ಅನ್ನೋದನ್ನು ನಾನೀಗ ಸಾಬೀತು ಪಡಿಸಿದ್ದೇನೆ. ಹಾಗಾಗಿ ನಾನು ಗ್ಲ್ಯಾಮರ್ ಹಾಗೂ ನಟನೆ ಎರಡನ್ನೂ ಏಕಕಾಲಕ್ಕೆ ನೀಡಬಲ್ಲ ಪ್ರತಿಭೆ. ಒಂದು ಕಂಪ್ಲೀಟ್ ಪ್ಯಾಕೇಜ್ ಎಂದು ತನ್ನನ್ನು ಪ್ರತಿಬಿಂಬಿಸುತ್ತಾರೆ ಈ ರಾಗಿಣಿ.
ಅದೆಲ್ಲಾ ಹಾಗಿರಲಿ ಬಿಡಿ, ಇದೀಗ ರಾಗಿಣಿಗೆ ಕೆಲ ಖಾಸಗಿ ಎಫ್ಎಂ ಹಾಗೂ ಟಿವಿ ವಾಹಿನಿಗಳು ಸ್ಯಾಂಡಲ್ ವುಡ್ ಸೈರನ್ ಎಂಬ ಅಡ್ಡ ಹೆಸರಿಟ್ಟಿದ್ದಾರಂತೆ. ಏನೇ ಆಗಲಿ ಬರ್ತಡೇ ಬೇಬಿಗೆ ಹ್ಯಾಪಿ ಬರ್ತ್ ಡೇ.