ಕನ್ನಡದಲ್ಲಿ ಭಟ್ಟರು ಬಿಟ್ಟ ಗಾಳಿಪಟ ಇನ್ನೂ ಹಸಿಹಸಿಯಾಗಿ ನೆನಪಿರುವಾಗಲೇ, ಬಾಲಿವುಡ್ಡಿನಲ್ಲೂ ಹೃತಿಕ್ ರೋಷನ್ ಮೊನ್ನೆ ಗಾಳಿಪಟ (ಕೈಟ್ಸ್ ಚಿತ್ರ) ಬಿಟ್ಟರು. ಇದೀಗ ಮತ್ತೊಂದು ಗಾಳಿಪಟ ಮನೆಮನೆಗಳಲ್ಲಿ ಸುದ್ದಿ ಮಾಡಲು ಹೊರಡುತ್ತಿದೆ.
ಈಗ ಗಾಳಿಪಟ ಸುದ್ದಿ ಕೇಳಿ ಬರುತ್ತಿರುವುದು ಕನ್ನಡ ಚಿತ್ರರಂಗದಲ್ಲಲ್ಲ. ಗಾಳಿಪಟ ಈಗ ಕಿರುತೆರೆಯಲ್ಲಿ ಹಾರಾಡಲು ಸಿದ್ಧವಾಗುತ್ತಿದೆ. ಈ ಟಿವಿ ವಾಹಿನಿಯಲ್ಲಿ ಗಾಳಿಪಟ ಎಂಬ ನೂತನ ಧಾರಾವಾಹಿ ಸಿದ್ಧವಾಗಿದ್ದು, ಇದೇ ತಿಂಗಳ 31ರಿಂದ ಪ್ರಾರಂಭವಾಗಲಿದೆ.
ಇದೊಂದು ಕೌಟುಂಬಿಕ ಕಥೆ. ಮನಸ್ಸು ಗಾಳಿಪಟ ಇದ್ದ ಹಾಗೆ. ಅದಕ್ಕೆ ಆಕಾಶದೆತ್ತರಕ್ಕೆ ಹಾರಾಡುವ ತವಕವಿದ್ದರೂ, ಇದನ್ನು ಕಂಟ್ರೋಲ್ ಮಾಡುವುದು ಒಂದೇ ಒಂದು ದಾರ. ಇದೇ ಸೂತ್ರದಾರ. ಇದೇ ಎಳೆ ಇಟ್ಟುಕೊಂಡ ಗಾಳಿಪಟ ಸಿದ್ಧವಾಗಿದೆ.
ಇದರಂತೆ ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 2.30ಕ್ಕೆ ಪ್ರಸಾರವಾಗಲಿರುವ ಈ ಧಾರಾವಾಹಿಯ ನಿರ್ಮಾಪಕರು ಕೆ.ವಿ. ರಾಮರಾವ್. ಇವರು ತೆಲುಗು ಚಿತ್ರರಂಗದ ಖ್ಯಾತ ನಟ ಸತ್ಯನಾರಾಯಣ ರಾವ್ ಅವರ ಪುತ್ರ. ಈ ಹಿಂದೆ ಛಾಯಾಗ್ರಾಹಕರಾಗಿದ್ದ ಕೆ. ಶಶಿಧರ್ ಅವರು ಈ ಧಾರಾವಾಹಿಯ ನಿರ್ದೇಶಕರು. ತಾರಾಗಣದಲ್ಲಿ ಪಲ್ಲವಿ, ಹಿರಣ್ಣಯ್ಯ, ಕೃಷ್ಣೇಗೌಡ, ಆಶಾಲತಾ ಮೊದಲಾವರಿದ್ದಾರೆ.