'ಹಾಗೆ ಸುಮ್ಮನೆ ಚಿತ್ರದ ಬಳಿಕ ಆಗೊಮ್ಮೆ ಈಗೊಮ್ಮೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟ ಕಿರಣ್ ಈಗ ಮತ್ತೊಮ್ಮೆ ಪೂರ್ಣ ಪ್ರಮಾಣದ ನಾಯಕ ನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರದ ಹೆಸರು ಪ್ರೇಮನಗರ. ಹೆಸರೇ ಹೇಳುವಂತೆ ಇದೊಂದು ಪ್ರೇಮ ಕಥೆ ಎಂದು ಮತ್ತೆ ವಿವರಿಸಬೇಕಾಗಿಲ್ಲ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ ಜೊತೆಗೆ ನಿರ್ದೇಶನದ ಜವಾಬ್ದಾರಿಯನ್ನು ಸಿ. ಸಂಪತ್ ಕುಮಾರ್ ಹೊತ್ತುಕೊಂಡಿದ್ದಾರೆ. ಇದುವರೆಗೆ ನಿರ್ಮಾಪಕರಾಗಿದ್ದ ಸಂಪತ್ ಈ ಚಿತ್ರದ ಮೂಲಕ ನಿರ್ದೇಶಕರಾಗಬೇಕೆಂಬ ಬಹುದಿನದ ಕನಸು ನನಸಾಗಿದೆ. ಚಿತ್ರದ ನಿರ್ಮಾಣಕ್ಕೆ ವೈ.ಎನ್. ಅಮೃತ ಸಾಥ್ ಕೊಟ್ಟಿದ್ದಾರೆ.
ಚಿತ್ರಕ್ಕೆ ಮುಂಬೈ ಮೂಲದ ಬೆಡಗಿಯೊಬ್ಬಳು ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಅಂದ ಹಾಗೆ, ಇಂದಿನ ಯುವ ಜನಾಂಗದ ಅಪಾಯಕಾರಿ ಹವ್ಯಾಸ ಎನಿಸಿಕೊಂಡಿರುವ ಡ್ರ್ಯಾಗ್ ರೇಸ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದೆಯಂತೆ. ಇದಕ್ಕಾಗಿ ಡ್ರ್ಯಾಗ್ ರೇಸ್ ನುರಿತ ಯುವಕರನ್ನು ಚಿತ್ರರಂಗ ಹುಡುಕುತ್ತಿದೆ.