ಗಾಂಧಿನಗರ ಚಿತ್ರ ನಿರ್ದೇಶಿಸಿದ್ದ ಲಕ್ಕಿ ಶಂಕರ್ ನಿರ್ದೇಶನದ ಜಮಾನ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಮುಂದಿನ ತಿಂಗಳ 10ರಂದು ತೆರೆಗೆ ಬರಲಿದೆ. ಬದ್ಕೋರಿಗೆ ನೂರು ದಾರಿ ಎಂಬ ಟ್ಯಾಗ್‌ಲೈನ್ ಹೊಂದಿರುವ ಈ ಚಿತ್ರದಲ್ಲಿ ನಾಯಕ ನಿತೀಶ್ ಕೂಡ ನಿರ್ಮಾಪಕರಲ್ಲೊಬ್ಬರು. ನಾಯಕಿಯಾಗಿ ಆಕರ್ಷ್ ಅಭಿನಯಿಸಿದ್ದಾರೆ. ಇವರು ಹುಬ್ಬಳ್ಳಿ ಮೂಲದವರಾದರೂ ಮುಂಬೈಯಲ್ಲಿ ನೆಲೆಸಿದ್ದಾರೆ. ವಿಶೇಷ ಪಾತ್ರದಲ್ಲಿ ಬಾಲಿವುಡ್ಡಿನ ಜಾಕಿಶ್ರಾಫ್ ನಟಿಸಿದ್ದು ತಮ್ಮ ಪಾತ್ರಕ್ಕೆ ತಾವೇ ಡಬ್ ಮಾಡಿದ್ದಾರೆ.
ಚಿತ್ರದಲ್ಲಿ ತೆಲುಗಿನ ವಿಕ್ರಮಾರ್ಕುಡುವಿನಲ್ಲಿ ನಟಿಸಿದ ವಿನುತ್ ಕುಮಾರ್, ಅರುಂಧತಿ ಚಿತ್ರದ ಲೀನಾ ಸಿದ್ದು, ಸಾಧುಕೋಕಿಲ, ಬಿರಾದಾರ್, ಮೊದಲಾದವರು ಚಿತ್ರದಲ್ಲಿದ್ದಾರೆ. ಇಳೆಯರಾಜಾ ಅವರ ಪುತ್ರ ಕಾರ್ತೀಕ್ ರಾಜಾ ಸಂಗೀತ ಸಂಯೋಜಿಸಿದ್ದಾರೆ. ಚಿತ್ರದಲ್ಲಿ ಇಳೆಯರಾಜಾ, ಕುನಾಲ್ ಗಾಂಜಾವಾಲಾ, ಉದಿತ್ ನಾರಾಯಣ್, ಶ್ವೇತಾ, ಸುನೀತಾ ಮೊದಲಾದವರು ಹಾಡಿದ್ದಾರೆ. ಇದೇ ಮೊದಲ ಬಾರಿಗೆ ಈ ಚಿತ್ರದ ಮೂಲಕ ಕ್ಯಾಮಾರ ಹಿಡಿದಿದ್ದಾರೆ ನಿರಂಜನ ಬಾಬು.
ಇಪ್ಪತ್ನಾಲ್ಕು ಗಂಟೆಗಳಲ್ಲಿ ನಡೆಯುವ ಕಥೆ ಇದು. ಇಲ್ಲಿ ಲವ್, ಸೆಂಟಿಮೆಂಟ್, ಆಕ್ಷನ್, ಕಾಮಿಡಿ ಎಲ್ಲವೂ ಇದೆಯಂತೆ. ಚಿತ್ರದಲ್ಲಿ ಮುಂಬಯಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು ಇಡೀ ಕಥೆಯನ್ನು ಅವರು ನಿರೂಪಿಸುತ್ತಾರಂತೆ. ಇದೇ ಚಿತ್ರದ ಹೈಲೈಟ್ ಎನ್ನುತ್ತದೆ ಚಿತ್ರತಂಡ.