ಉಪೇಂದ್ರ ನಿರ್ದೇಶನದ ಸೂಪರ್ ಚಿತ್ರ ಮತ್ತೆ ಸುದ್ದಿ ಮಾಡಿದೆ. ಈಗಾಗಲೇ ಚಿತ್ರತಂಡದಿಂದ ಹೊರಬಿದ್ದವರ ಸಂಖ್ಯೆ ಹದಿನಾಲ್ಕನ್ನು ದಾಟಿದೆ ಎನ್ನಲಾಗುತ್ತಿದೆ. ಇದೀಗ ಮತ್ತೊಬ್ಬರು ಸೂಪರ್‌ನಿಂದ ಹೊರಬಿದ್ದಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಡಿದ್ದು ಅಚ್ಚರಿ ಮೂಡಿಸಿದೆ.
ಈ ಬಾರಿ ಹೊರಬಿದ್ದವರೆಂದು ಹೇಳಲಾಗುತ್ತಿರುವುದು ಬೇರಾರೂ ಅಲ್ಲ, ಚಿತ್ರದ ಸಾಕ್ಷಾತ್ ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್. ಬಲ್ಲ ಮೂಲಗಳ ಪ್ರಕಾರ ಉಪೇಂದ್ರ ಅವರೇ ತಮ್ಮ ಹೋಮ್ ಬ್ಯಾನರ್‌ನಡಿ ಚಿತ್ರ ನಿರ್ಮಾಣಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಚಿತ್ರತಂಡದಿಂದ ರಾಕ್‌ಲೈನ್ ವೆಂಕಟೇಶ್ ಹೊರಬಂದಿದ್ದಾರೆ.
ಅದೇನೇ ಇರಲಿ. ಒಂದು ಚಿತ್ರವನ್ನು ಕೈಗೆತ್ತಿಕೊಂಡ ಬಳಿಕ ಅದರಿಂದ ಹೊರಬರುತ್ತಿರುವುದು ರಾಕ್ಲೈನ್ ವೆಂಕಟೇಶ್ ವೃತ್ತಿ ಜೀವನದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. ಇದೀಗ ಉಪೇಂದ್ರ ಲಂಡನ್ನಲ್ಲಿ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ನಾಯಕಿಯಾಗಿ ನಯನತಾರಾ ನಟಿಸುತ್ತಿರುವ ಈ ಚಿತ್ರದ ಮತ್ತೊಂದು ಪಾತ್ರಕ್ಕೆ ಬಾಲಿವುಡ್ ನಟಿ ಟುಲಿಪ್ ಜೋಶಿ ಇತ್ತೀಚೆಗೆ ಆಯ್ಕೆಯಾಗಿದ್ದರು. ಅದೇನೇ ಇರಲಿ ಇನ್ನಾರೂ ಹೋಗದಿರಲಿ. ಚಿತ್ರ ಬೇಗನೇ ಬಿಡುಗಡೆಯಾಗಲಿ ಎಂಬುದೇ ಉಪ್ಪಿ ಅಭಿಮಾನಿಗಳ ಆಶಯ.