ದಿಗಂತ್ ಪಾನಿಪುರಿ ನಾಯಕರಂತೆ. ಹೌದು. ಇದೇನು ಪಾನಿಪುರಿಗೂ ದೂದ್‌ಪೇಡ ದಿಗಂತ್‌ಗೂ ಎತ್ತಣಿಂದೆತ್ತಣ ಸಂಬಂಧವಯ್ಯಾ ಎಂದು ತಲೆಕೆರೆದುಕೊಳ್ಳಬೇಡಿ. ಗೊಂದಲ ಬೇಡ. ಪಾನಿಪುರಿ ಹೆಸರಿನ ಹೊಸ ಚಿತ್ರದಲ್ಲಿ ದಿಗಂತ್ ನಾಯಕರಂತೆ. ಇವರಿಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ರಾಗಿಣಿ.
ಈಗಾಗಲೇ ವೀರ ಮದಕರಿ ಚಿತ್ರದ ಯಶಸ್ಸಿನ ನಂತರ ಶಂಕರ್ ಐಪಿಎಸ್ ಚಿತ್ರದ ಮೂಲಕ ಚುಂಬಕ ನಿನ್ನ... ಎನ್ನುತ್ತಾ ಹಾಟ್ ಅಂಡ್ ಸೆಕ್ಸೀಯಾಗಿ ವಿಜಯ್ ಅವರ ಸಿಕ್ಸ್ ಪ್ಯಾಕ್ ಬಾಡಿ ಸುತ್ತ ಬಳ್ಳಿಯಂತೆ ಸುತ್ತಿದ ಮಸಾಲೆ ಪುರಿಯೇ ಈ ರಾಗಿಣಿ. ಪ್ಯಾಂಟಲೂನ್ಸ್ ಫೆಮಿನಾ ಮಿಸ್ ಇಂಡಿಯಾದಲ್ಲಿ ಥಳುಕಿ ಬಳುಕಿದ ಬೆಡಗಿಯೀಕೆ. ಸಧ್ಯಕ್ಕೆ ಸ್ಯಾಂಡಲ್‌ವುಡ್ಡಿನ ಹಾಟ್ ಕೇಕ್.
ಈ ದಿಗಂತ್, ರಾಗಿಣಿ ಜೋಡಿ ಇದೇ ಮೊದಲ ಬಾರಿಗೆ ತೆರೆಯಲ್ಲಿ ಜೋಡಿಯಾಗುತ್ತಿದ್ದಾರೆ. ಆದರೆ ಈ ಪಾನಿಪುರಿಕೈಸೇರುವ ದಿನ ಬಹಳ ದೂರದಲ್ಲಿದೆ. ಏಕೆಂದರೆ ರಾಗಿಣಿ ಬಳಿ ಈಗ ಸಾಕಷ್ಟು ಚಿತ್ರಗಳಿವೆ. ಎಲ್ಲವನ್ನೂ ಮುಗಿಸಿಕೊಂಡು ಈ ಚಿತ್ರಕ್ಕೆ ಬರುವ ಹೊತ್ತಿಗೆ ಕೆಲ ತಿಂಗಳು ಕಳೆದಿರುತ್ತದೆ ಎಂದು ಹೇಳಲಾಗುತ್ತಿದೆ.
ಕಳೆದ ವಾರವಷ್ಟೇ ಶಂಕರ್ ಐಪಿಎಸ್ ಬಿಡುಗಡೆ ಆಗಿರುವ ಸಂಭ್ರಮದಲ್ಲಿರುವ ರಾಗಿಣಿ ಕೈಲೀಗ ಹೋಳಿ, ಗಂಡೆದೆ, ನಾಯಕ ಸೇರಿದಂತೆ ಐದಾರು ಚಿತ್ರಗಳಿವೆ. ಇಷ್ಟೇ ಅಲ್ಲ, ಆಫರ್‌ಗಳೂ ಬೇಕಾದಷ್ಟಿವೆ. ಅದೇನೇ ಇರಲಿ. ಪಾನಿಪುರಿ ರುಚಿಯಾಗಿ ಕಾಯಲು ಪ್ರೇಕ್ಷಕರಂತೂ ತಯಾರಾಗಿದ್ದಾರೆ.