ಕನ್ನಡ ಚಿತ್ರರಂಗವೇ ಹಾಗೆ. ಹೊಸ ಹೊಸ ಗಾಸಿಪ್‌ಗಳ ಗುಚ್ಛ. ಈ ದಿನ ಒಂದು ಸುದ್ದಿ ಪ್ರಾಮುಖ್ಯತೆ ಪಡೆದರೆ ನಾಳೆ ಮತ್ತೊಂದು, ನಾಡಿದ್ದು ಮಗದೊಂದು. ಇಂಥದ್ದರಲ್ಲಿ ಇತ್ತೀಚೆಗೆ ಮೊನ್ನೆ ಮೊನ್ನೆ ಸುದ್ದಿಯಾದ ಸೂಪರ್ ಗಾಸಿಪ್ ಅದೇ ರಾಕ್‌ಲೈನ್ ವೆಂಕಟೇಶ್ ಉಪೇಂದ್ರರ ಸೂಪರ್ ಚಿತ್ರದಂದ ಹೊರಬಂದದ್ದು. ಆದರೆ ಇದೀಗ ಆ ಸುದ್ದಿ ಉಲ್ಟಾ ಹೊಡೆದಿದೆ. ಸ್ವತಃ ರಾಕ್‌ಲೈನ್ ರಾಕ್ ಥರ ಎದ್ದು ಬಂದಿದ್ದಾರೆ.
ರಾಕ್‌ಲೈನ್ ವೆಂಕಟೇಶ್ ಸಿಟ್ಟಾಗಿದ್ದಾರೆ. ಅವರು 'ಸೂಪರ್' ತಂಡದಿಂದ ಆಚೆ ಬಂದಿರುವ ಸುದ್ದಿಯನ್ನು ಅವರೇ ಓದಿ, ನೋಡಿ ಸುಸ್ತಾಗಿದ್ದಾರೆ. ಅದಕ್ಕೇ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡು ಬೈಯುತ್ತಿದ್ದಾರೆ. ಇವರು ಬೈಯುತ್ತಿರುವುದು ಉಪ್ಪಿಗಲ್ಲ, ಬದಲಾಗಿ ಇಂಥ ಸುಳ್ಳು ಸುದ್ದಿ ಹಬ್ಬಿಸಿದವರನ್ನು.
MOKSHA
ಅಂದಹಾಗೆ, ರಾಕ್‌ಲೈನ್ ಸೂಪರ್ ಚಿತ್ರದಿಂದ ಆಚೆ ಬಂದಿಲ್ಲವಂತೆ. ಚಿತ್ರ ತಂಡದ ಜತೆಯೇ ಇದ್ದಾರಂತೆ. ಬಹುಕೋಟಿ ವೆಚ್ಛದಲ್ಲಿ ನಿರ್ಮಾಣವಾಗುತ್ತಿರುವ ಉಪ್ಪಿ ನಿರ್ದೇಶನದ 'ಸೂಪರ್' ಚಿತ್ರದಿಂದ ನಾನು ಹೊರ ಬಿದ್ದಿಲ್ಲ. 'ರಾಕ್' ಆಗಿ ಉಳಿದುಕೊಂಡಿದ್ದೇನೆ. ಹೊರಬಿದ್ದಿದ್ದೇನೆ ಎಂಬ ಸುದ್ದಿಯನ್ನು ಕೆಲವರು ಸುಮ್ಮನೇ ಹಬ್ಬಿಸುತ್ತಿದ್ದಾರೆ. ಮೊನ್ನೆ ತಾನೇ ಒಬ್ಬ ಸಹಾಯಕ ನಿರ್ದೇಶಕರು ಮಾತ್ರ ಚಿತ್ರದಿಂದ ಹೊರಬಂದದ್ದು ನಿಜ. ಆದರೆ ನಾನು ಸೇರಿದಂತೆ 14 ಮಂದಿ ಈ ಚಿತ್ರದಿಂದ ಹೊರಬಿದ್ದಿದ್ದಾರೆ ಎಂಬ ವದಂತಿ ಮಾತ್ರ ಸುಳ್ಳು. ಇದಕ್ಕೆಲ್ಲ ಕಿವಿಗೊಡುವ ಅವಶ್ಯಕತೆ ಇಲ್ಲ ಎಂದು ರಾಜಾರೋಷವಾಗಿ ಹೇಳಿದ್ದಾರೆ ರಾಕ್.
ಕೆಲವರಿಗೆ ಮಾಡಲು ಕೆಲಸ ಇರುವುದಿಲ್ಲ. ಸದ್ಯದಲ್ಲೇ ನಾವು ವಿದೇಶಕ್ಕೆ ತೆರಳಲಿದ್ದೇವೆ. ಕೆಲ ಕಲಾವಿದರಿಗೆ ವೀಸಾ ಸಮಸ್ಯೆ ಆದ ಕಾರಣ ಅಲ್ಲಿಗೆ ಹೋಗುವುದು ತಡವಾಗುತ್ತಿದೆ ಎಂಬ ತಲೆಬಿಸಿಯಲ್ಲಿ ನಾವಿದ್ದೇವೆ. ಇಲ್ಲಿ ನೋಡಿದರೆ ಇನ್ನೇನೋ ಸುದ್ದಿ ಹಬ್ಬಿಸಲಾಗುತ್ತಿದೆ. ಕೆಲಸಕ್ಕೆ ಬಾರದವರ ಮಾತಿಗೆ ಯಾರೂ ಬೆಲೆಗೊಡುವ ಅಗತ್ಯ ಇಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ ರಾಕ್ ಹೇಳಿದ್ದಾರೆ.