ಹೆಸರಿಡದ ಚಿತ್ರವೊಂದು ಸದ್ಯ ಸುದ್ದಿಯಲ್ಲಿದೆ. ಪ್ರೊಡಕ್ಷನ್ ನಂ.1 ಅನ್ನುವ ಖಾಯಂ ನಾಮದೊಂದಿಗೆ ಇದು ಸದ್ಯ ಗುರುತಾಗಿದ್ದು, ಮುಂದೆ 'ಕಿಡ್ನ್ಯಾಪ್' ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಚಿತ್ರದ ವಿಶೇಷ ಎಂದರೆ ಇದೊಂದು ತ್ರೀಡಿ ಥ್ರಿಲ್ಲರ್ ಚಿತ್ರ. ಚಿತ್ರದ ನಿರ್ಮಾಪಕ ರಾಜವರ್ಮರಿಗೆ 'ಅವತಾರ್' ಚಿತ್ರ ನೋಡಿದಾಗ ಬಂದ ಉತ್ಸಾಹಕ್ಕೆ ಕಂಡುಕೊಂಡ ಪರಿಹಾರ ಈ ಚಿತ್ರ. ಇದರಿಂದ ಗುಣಮಟ್ಟದ ಚಿತ್ರವಾಗಿ ಇದನ್ನು ನಿರ್ಮಿಸಲು ಅವರು ಹಾಲಿವುಡ್ ತಂತ್ರಜ್ಞಾನ ಹಾಗೂ ತಂತ್ರಜ್ಞರು ಎರಡನ್ನೂ ಬಳಸಿಕೊಳ್ಳಲು ನಿರ್ಧರಿಸಿದ್ದಾರಂತೆ. ಹೀಗಾಗಿ ಇದು ಒಂದು ಹೊಸ ಅವತಾರವಾಗಿ ಮೂಡಿಬರುವಲ್ಲಿ ಯಾವುದೇ ಸಂಶಯವಿಲ್ಲ.
ಚಿತ್ರವನ್ನು ಪ್ರವೀಣ್ ನಿರ್ದೇಶಿಸುತ್ತಿದ್ದಾರೆ. ಚಕ್ರಿ ಸಂಗೀತ ನಿರ್ದೇಶಕರು. ಚಿತ್ರದ ನಾಯಕ 'ನನ್ನವನು' ಆದ ಪ್ರಜ್ವಲ್ ದೇವರಾಜ್. ಈ ಚಿತ್ರ ನಿರ್ಮಾಣಕ್ಕಾಗಿ ಆರು ತಿಂಗಳಿಂದ ಸಾಹಸ ನಡೆಸುತ್ತಿರುವ ವರ್ಮ, ಚಿತ್ರಕ್ಕೆ 6 ಮಂದಿ ನಾಯಕಿಯರನ್ನು ಆಯ್ಕೆಮಾಡಲಿದ್ದಾರಂತೆ.
ಇದೊಂದು ಸೀದಾಸಾದಾ ಹುಡುಗನ ಕಥೆ. ಅವನನ್ನು ಕೆಲವರು ಕಿಡ್ನ್ಯಾಪ್ ಮಾಡಿ ಕೋಟೆಯಲ್ಲಿ ಅಡಗಿಸಿಟ್ಟು ಬಿಡುತ್ತಾರೆ. ಅಲ್ಲಿ 13 ಗಂಟೆಗಳ ಕಾಲ ಇರುವ ಆ ಯುವಕ ಅಲ್ಲೇನು ಮಾಡುತ್ತಾನೆ ಎನ್ನುವುದೇ ಚಿತ್ರದ ಜೀವಾಳ. ಕೋಟೆಯ ವಾತಾವರಣದಲ್ಲಿ ಹಾಡುಗಳು ಕೇಳಿ ಬರಲಿವೆ. ಸಂದೀಪ್ ಮಲಾನಿ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
ಸುಮಾರು 5 ಕೋಟಿ ರೂ. ಖರ್ಚಾದರೂ ಚಿಂತೆ ಇಲ್ಲ ಅನ್ನುತ್ತಿದ್ದಾರೆ ರಾಜವರ್ಮ. ಒಟ್ಟಾರೆ ಚಿತ್ರದ ಆರಂಭ ಯಾವಾಗ ಆಗುವುದೋ ಗೊತ್ತಿಲ್ಲ. ಎಲ್ಲವೂ ಸುಸೂತ್ರವಾಗಿ ಕನ್ನಡಕ್ಕೊಂದು ಉತ್ತಮ ತ್ರೀಡಿ ಚಿತ್ರ ಲಭಿಸಲಿ ಎನ್ನುವುದೇ ಆಶಯ.