ನಟಿ ಪೂಜಾ ಗಾಂಧಿ ಇತ್ತೀಚಿನ ದಿನಗಳಲ್ಲಿ ಎಷ್ಟೊಂದು ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವುದು ನಿಮಗೆಲ್ಲಾ ಗೊತ್ತು. ತುಂಬಾ ಬ್ಯುಸಿ ಆಗಿರುವ ಕನ್ನಡದ ಬೆರಳೆಣಿಕೆಯಷ್ಟು ನಟಿಯರಲ್ಲಿ ಇವರೂ ಒಬ್ಬರು. ಹತ್ತಾರು ಚಿತ್ರದ ಆಫರುಗಳ ನಡುವೆ ಅವರು ಮತ್ತೊಂದು ಮಧ್ಯಮ ವರ್ಗದ ಕೌಟುಂಬಿಕ ಕಥಾವಸ್ತುವನ್ನು ಒಳಗೊಂಡ ಸಿನಿಮಾಗೆ ಸಹಿ ಮಾಡಿದ್ದಾರೆ.
ಚಿತ್ರದ ಹೆಸರು ಆಪ್ತ. ಅರೆರೆ ಇದು ನಮಗೆ ಗೊತ್ತು ಅಂದಿರಾ? ಆದರೆ ಇದು ಅಪ್ಡೇಟ್ ಸುದ್ದಿ. ಚಿತ್ರಕ್ಕೆ ಒಬ್ಬ ನಾಯಕ, ಐವರು ನಾಯಕಿಯರು ಎಂದು ಕೇಳಿದ್ದೆವು. ಆದರೆ ಈಗ ಅದೆಲ್ಲಾ ಫೈನಲ್ ಆಗಿದೆ. ನಾಯಕನಾಗಿ ಹೊಸ ಹುಡುಗ ನೀರಜ್ ಶ್ಯಾಮ್ ಆಯ್ಕೆಯಾಗಿದ್ದಾರೆ. ಪೂಜಾ ಜತೆ ಇತರೆ ನಟಿಯರಾಗಿ ಭವ್ಯಕಲಾ, ಪ್ರಜ್ಞಾ, ಮಾನಸಿ ಸದ್ಯ ಆಯ್ಕೆಯಾಗಿದ್ದಾರೆ. ಇನ್ನೊಬ್ಬ ನಟಿಯ ಆಯ್ಕೆ ಆಗಬೇಕಿದೆ. ಕಿರುತೆರೆ ನಟ ರವಿಕಿರಣ್ ಬಹುದಿನದ ನಂತರ ಹಿರಿತೆರೆಗೆ ಬಂದು ವಿಲನ್ ಆಗುತ್ತಿದ್ದಾರೆ.
ಇದು ಪಕ್ಕಾ ಲವ್ ಸ್ಟೋರಿಯಾಗಿದ್ದು, ಸಸ್ಪೆನ್ಸ್ ಥ್ರಿಲ್ಲರ್ ಕೂಡ ಹೌದು ಎನ್ನುತ್ತಾರೆ ನಿರ್ದೇಶಕ ಸಂಜೀವ್. ಇವರ ಪ್ರಕಾರ, ಈ ಚಿತ್ರಕ್ಕೆ ಪೂಜಾ ಪಕ್ಕಾ ರೋಲ್ ಅಂತೆ. ಅನು ಚಿತ್ರದಲ್ಲಿ ನೀಡಿದ ಅವರ ಅಭಿನಯದಿಂದ ಮಾರುಹೋಗಿರುವ ತಾವು ಈ ಪಾತ್ರಕ್ಕೆ ಅವರೇ ಸೂಕ್ತ ಎಂದು ಆಯ್ಕೆ ಮಾಡಿದ್ದೇನೆ ಎನ್ನುತ್ತಾರೆ.
ಆಂಧ್ರ ಮೂಲದ ಇವರು ಚಿತ್ರವನ್ನು ವಿಜಯವಾಡದಲ್ಲಿ ನಡೆದ ಮರ್ಡರ್ ಮತ್ತು ಮಂಗಳೂರಿನ ಪಬ್ ವಿವಾದ ಆಧರಿಸಿ ಹೆಣೆದಿದ್ದಾರೆ. ಪೂಜಾ ಪ್ರಧಾನ ನಾಯಕಿ. ಹಳ್ಳಿ ಹುಡುಗಿಯ ಪಾತ್ರ ಮಾಡುತ್ತಿದ್ದಾರೆ. ಹಳ್ಳಿಯಿಂದ ಬಂದು ಪೇಟೆ ಸೇರುವ ಹುಡುಗಿಯರು ಏನೆಲ್ಲ ಕಷ್ಟ ಅನುಭವಿಸುತ್ತಾರೆ. ಕೆಲವರು ತಪ್ಪು ನಿರ್ಧಾರ ಕೈಗೊಂಡು ಹೇಗೆ ವ್ಯಥೆ ಪಡುತ್ತಾರೆ ಎಂಬುದು ಕಥಾ ಹಂದರವಂತೆ.
ಸಾಧು ಕೋಕಿಲಾ ಭಿಕ್ಷುಕನ ಪಾತ್ರ ಮಾಡುತ್ತಿದ್ದಾರೆ. ಐದು ಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಟಿ.ಎಸ್. ಬಾಬು ನಿರ್ಮಾಪಕರಾಗಿದ್ದು, ಮಾರಿಯೋ ಎಕ್ಸರ್ ಸಂಗೀತ ನೀಡಲಿದ್ದಾರೆ. ಮುಂದಿನ ಅಪ್ಡೇಟ್ ಸದ್ಯವೇ ಸಿಗಲಿದೆ.