ವಿಜಯ್ ಅಭಿನಯದ ಅದ್ದೂರಿ ಚಿತ್ರ ಶಂಕರ್ ಐಪಿಎಸ್ ಚಿತ್ರ ಪ್ರದರ್ಶನಕ್ಕೆ ಇದೀಗ ಸಿಟಿ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ತಡೆ ನೀಡುವ ಮೂಲಕ ಆರಂಭದಲ್ಲೇ ವಿಘ್ನ ತಲೆದೋರಿದೆ. ನ್ಯಾಯಾಲಯ ಹಾಗೂ ವಕೀಲರನ್ನು ಅವಹೇಳನ ಮಾಡುವಂಥ ದೃಶ್ಯಗಳಿವೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜೂ.6ರವರೆಗೆ ತಾತ್ಕಾಲಿಕ ತಡೆ ನೀಡಲಾಗಿದೆ.
ಬೆಂಗಳೂರು ವಕೀಲರ ಸಂಘ ಮತ್ತು ಕೆಲ ವಕೀಲರು ಚಿತ್ರ ಪ್ರದರ್ಶನ ರದ್ದು ಪಡಿಸುವಂತೆ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಸತೀಶ್ ಸಿಂಗ್, ಚಿತ್ರದ ಪ್ರದರಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮಧ್ಯಂತರ ಆದೇಶ ನೀಡಿದರು. ವಕೀಲರು ಹಾಗೂ ನ್ಯಾಯಾಲಯದ ಗೌರವಕ್ಕೆ ಧಕ್ಕೆ ತರುವಂಥ ಸಂಭಾಷಣೆ ಚಿತ್ರದಲ್ಲಿದ್ದು, ವಕೀಲರನ್ನು ದಲ್ಲಾಳಿಗಳು ಹಾಗೂ ನ್ಯಾಯಾಲಯವನ್ನು ಮಾರುಕಟ್ಟೆ ಎಂದು ಜರಿಯಲಾಗಿದೆ ಎಂದು ವಕೀಲರು ದೂರಿದ್ದರು. ಇಂತಹ ಅವಹೇಳನಕಾರಿ ಶಬ್ದಗಳಿರುವುದರಿಂದ ವಕೀಲರು ಚಿತ್ರದ ಪ್ರದರ್ಶನಕ್ಕೆ ತಡೆಯೊಡ್ಡಿದ್ದಾರೆ.
ವಿಜಯ್, ರಾಗಿಣಿ ತಾರಾಗಣದ ಈ ಚಿತ್ರವನ್ನು ಎಂ.ಎಸ್.ರಮೇಶ್ ನಿರ್ದೇಶಿಸಿ, ಕೆ.ಮಂಜು ನಿರ್ಮಿಸಿದ್ದಾರೆ. ಈ ಚಿತ್ರದ ಸಂಭಾಷಣೆಯನ್ನೂ ನಿರ್ದೇಶಕ ರಮೇಶ್ ಅವರೇ ಬರೆದಿದ್ದು, ಇದು ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ಗಳಿಸಿತ್ತು. ಈ ಬೆಳವಣಿಗೆಯಿಂದ ಇದೀಗ ಚಿತ್ರ ಪ್ರದರ್ಶನಕ್ಕೆ ತಡೆಯುಂಟಾದಂತಾಗಿದ್ದು, ಇದರಿಂದ ನಿರ್ಮಾಪಕ ಕೆ.ಮಂಜು ತುಂಬ ಬೇಸರ ಮಾಡಿಕೊಂಡಿದ್ದಾರೆ. ಕಾರಣ, ಈ ಬೆಳವಣಿಗೆಯಿಂದಾಗಿ, ರಾಜ್ಯಾದ್ಯಂತ 85 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದ ಶಂಕರ್ ಐಪಿಎಸ್‌ಗೆ ಭಾರೀ ಪೆಟ್ಟು ನೀಡಿದಂತಾಗಿದೆ.
ಆದರೆ ಕೋರ್ಟಿನ ತಡೆ ಇದ್ದಾಗ್ಯೂ, ಹಲವೆಡೆ ಸಿನಿಮಾ ಪ್ರದರ್ಶನ ನಡೆಸಿದ ಹಿನ್ನೆಲೆಯಲ್ಲಿ ಮತ್ತೆ ಕೋರ್ಟು ನಿರ್ಮಾಪಕರನ್ನು ತರಾಟೆಗೆ ತೆಗೆದುಕೊಂಡಿದೆ. ಕೋರ್ಟಿನಲ್ಲಿ ಮಂಜು ಕ್ಷಮಾಪಣೆ ಕೇಳಿದ್ದಾರೆ. ಆದರೂ ವಿಚಾರಣೆ ಮುಂದುವರಿಯಲಿದೆ.