ಸ್ಯಾಂಡಲ್ ವುಡ್ಡಿನ ಆಕ್ಷನ್ ಕಿಂಗ್ ದರ್ಶನ್ ಅಭಿನಯದ 'ಚಿಂಗಾರಿ' ಸದ್ಯದಲ್ಲೇ ಸೆಟ್ಟೇರಲಿದೆ. ನಿರ್ಮಾಣ ಹೊಣೆ ಹೊತ್ತಿರುವ ನೃತ್ಯ ನಿರ್ದೇಶಕ ಹರ್ಷ ತಮ್ಮ ಮೂರನೇ ಚಿತ್ರ ಚಿಂಗಾರಿಗೆ ದರ್ಶನ್ ಅವರನ್ನು ಆಯ್ಕೆ ಮಾಡಿದ್ದಾರೆ. ಈ ಚಿತ್ರದ ಬಹುಪಾಲು ವಿದೇಶದಲ್ಲೆ ಚಿತ್ರೀಕರಣ ನಡೆಯಲಿದೆ ಅಂತ ತಿಳಿಸಿದ್ದಾರೆ.
ದರ್ಶನ್ ಚಿತ್ರ ಎಂದರೆ ಪಡ್ಡೆ ಹುಡುಗರಿಗೆ ಬೇಕಾದ ಫೈಟ್, ಮಸಾಲೆಗೇನೂ ಕೊರತೆಯಿರುವುದಿಲ್ಲ ಎಂಬುದಂತೂ ಸತ್ಯ. ಅಲ್ಲದೆ ಒಂದೆರಡು ಉತ್ತಮ ಹಾಡು, ಕುಣಿತಗಳಂತೂ ಇದ್ದೇ ಇರುತ್ತದೆ ಎನ್ನುವುದು ಗಾಂಧಿನಗರದ ಮಂದಿಯ ಮಾತು. ಆದರೆ, ಹರ್ಷಾ ಪಾಲಿಗೆ ಇದೊಂದು ವಿಭಿನ್ನ ಚಿತ್ರ ಎನ್ನುತ್ತಾರೆ. ಚಿತ್ರಕ್ಕೆ ಹೊರಾಂಗಣವೇ ಹೆಚ್ಚಿನ ಬಂಡವಾಳ ಅಲ್ಲದೆ, ಪ್ರೇಕ್ಷಕರಿಗೆ ರಸದೌತಣ ಎಂದಿದ್ದಾರೆ.
ಇನ್ನೂ ದರ್ಶನ್ ಅಭಿನಯದ ಚಿತ್ರಗಳಿಗೆ ಗಲ್ಲಾಪೆಟ್ಟಿಗೆಗೇನೂ ಮೋಸವಿಲ್ಲ. ಬಿ ಸೆಂಟರ್‌ಗಳಲ್ಲಿ ಚೆನ್ನಾಗಿ ಓಡುತ್ತದೆ ಎನ್ನುವುದನ್ನು ಹರ್ಷಾ ಮರೆತಿಲ್ಲ. ಆದರೆ ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆ ನಡೆದಿಲ್ಲ. ಹುಡುಕಾಟ ಸಾಗಿದ್ದು, ಚಿತ್ರ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ.