ತಣ್ಣಗಾದ ಶಂಕರ್ ಐಪಿಎಸ್ ವಿವಾದ: ವಿವಾದಿತ ದೃಶ್ಯಗಳಿಗೆ ಕತ್ತರಿ
PR
ಶಂಕರ್ ಐಪಿಎಸ್ ಚಿತ್ರದ ವಿವಾದ ಕೊನೆಗೂ ಕೊನೆಗೊಂಡಿದೆ. ಬೆಂಗಳೂರು ಸಿಟಿ ಸಿವಿಲ್ ನ್ಯಾಯಾಲಯ ಚಿತ್ರದ ವಿವಾದಿತ ದೃಶ್ಯಕ್ಕೆ ಕತ್ತರಿ ಹಾಕುವಂತೆ ಆದೇಶಿಸಿದೆ. ಜೊತೆಗೆ ಮಾಧ್ಯಮಗಳ ಮುಂದೆ ಕ್ಷಮೆ ಕೋರುವಂತೆ ನಿರ್ಮಾಪಕರಿಗೆ ಸೂಚನೆಯನ್ನೂ ನೀಡಲಾಗಿದೆ.
ನ್ಯಾಯಾಲಯವನ್ನು ಮಾರುಕಟ್ಟೆ ಎಂದೂ, ನ್ಯಾಯಾಧೀಶರನ್ನು ದಲ್ಲಾಳಿಗಳೆಂದೂ ಕರೆಯುವ ಡೈಲಾಗುಗಳು ಚಿತ್ರದಲ್ಲಿತ್ತು. ಈ ಹಿನ್ನೆಲೆಯಲ್ಲಿ ವಕೀಲರು ಚಿತ್ರದ ವಿರುದ್ಧ ಮೊಕದ್ದಮೆ ಹೂಡಿ, ಚಿತ್ರಕ್ಕೆ ಜೂ.5ರವರೆಗೆ ತಾತ್ಕಾಲಿಕ ತಡೆ ತಂದಿದ್ದರು. ಆದರೆ ಚಿತ್ರ ರಾಜ್ಯದ 86 ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಜನ ಡೈಲಾಗುಗಳನ್ನೂ ಮೆಚ್ಚಿಕೊಂಡಿದ್ದರು. ಹೀಗಾಗಿ ನಿರ್ಮಾಪಕ 'ಗಂಡುಗಲಿ' ಕೆ.ಮಂಜು ಅವರಿಗೆ ಇದೊಂದು ದೊಡ್ಡ ಹೊಡೆತವಾಗಿತ್ತು. ಕೆಲವೆಡೆ ತಡೆಯಿದ್ದರೂ, ಚಿತ್ರ ಪ್ರದರ್ಶನ ಕಂಡಿತ್ತು. ಹೀಗಾಗಿ ಚಿತ್ರ ಮತ್ತೆ ವಿವಾದ ಸೃಷ್ಟಿಸಿತು. ತಾತ್ಕಾಲಿಕ ತಡೆಯಿದ್ದರೂ, ಚಿತ್ರ ಪ್ರದರ್ಶನ ಮಾಡಿದ್ದಕ್ಕೆ ನಿರ್ಮಾಪಕರಿಗೆ ನ್ಯಾಯಾಲಯ ಛೀಮಾರಿ ಹಾಕಿತು. ಕೆ. ಮಂಜು ಕ್ಷಮೆ ಕೇಳಿದ್ದೂ ಆಯಿತು. ಇದೀಗ ತೀರ್ಪು ಹೊರಬಿದ್ದಿದೆ.
ಈಗಾಗಲೇ ಶಂಕರ್ ಐಪಿಎಸ್ ಚಿತ್ರ ಪ್ರದರ್ಶನಕ್ಕೆ ಚಾಲನೆ ದೊರೆತಿದ್ದು, ಮುಂಬರುವ ಒಂದೆರಡು ದಿನಗಳಲ್ಲಿ ಚಿತ್ರದ ವಿವಾದಿತ ದೃಶ್ಯಗಳಿಗೆ ಕತ್ತರಿ ಬೀಳಲಿದೆ. ಚಿತ್ರವನ್ನು ಪರಿಶೀಲಿಸಲು ವಕೀಲರು ಇಂದು ಸಂಜೆ ಶಂಕರ್ ಐಪಿಎಸ್ ಚಿತ್ರವನ್ನು ಮಲ್ಲೇಶ್ವರದ ರೇಣುಕಾಂಬ ಚಿತ್ರಮಂದಿರದ್ಲಲಿ ವೀಕ್ಷಿಸಲಿದ್ದಾರೆ.