ವಿದ್ಯಾರ್ಥಿಗಳಿಂದಲೇ ಕಲಾತ್ಮಕ ಚಿತ್ರ ಭಗವತಿ ಕಾಡು: ಹಂಸಲೇಖ
MOKSHA
ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ ವಿದ್ಯಾರ್ಥಿಗಳು ಸೇರಿ 'ಭಗವತಿ ಕಾಡು' ಎಂಬ ಚಲನಚಿತ್ರ ಮಾಡುತ್ತಿದ್ದಾರೆ. ಈ ಕಲಾತ್ಮಕ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ನಟಿಸುತ್ತಿದ್ದಾರೆ. 'ಪರಿಸರ' ಉಳಿಸುವುದರ ಜತೆಗೆ ಶಿಕ್ಷಣದ ಅಗತ್ಯತೆಯನ್ನು ಈ ಚಿತ್ರ ಸಾರುತ್ತದೆ ಎಂದು ಸಂಗೀತ ನಿರ್ದೇಶಕ ಹಂಸಲೇಖ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಗರಗ-ನಾಗಲಾಪುರ ಗ್ರಾಮದಲ್ಲಿರುವ 300 ವರ್ಷದ ಬೇವಿನಮರದ ಕೆಳಗೆ ಸೆಟ್ ಹಾಕಿ ಚಿತ್ರೀಕರಣ ನಡೆಯುತ್ತಿದೆ. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚಿತ್ರ ನಿರ್ಮಾಣದಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡುತ್ತದೆ. ಜತೆಗೆ ತಮ್ಮ ಬದುಕನ್ನು ಕಲಾ ಕ್ಷೇತ್ರದಲ್ಲಿ ಕಂಡುಕೊಳ್ಳಲು ಇದೊಂದು ವೇದಿಕೆಯಾಗಲಿದೆ ಎಂದರು.
ಈ ಚಿತ್ರದಲ್ಲಿ ಪರಿಸರ ಹಾಗೂ ಶಿಕ್ಷಣದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಕೇರಿಗೆ ಸರಕಾರಿ ಶಾಲೆ ಮಂಜೂರಾದರೂ ಅದಕ್ಕೆ ಊರಿನ ಗೌಡ ವಿರೋಧ ವ್ಯಕ್ತಪಡಿಸುತ್ತಾನೆ. ಈ ಶಾಲೆಯನ್ನು ಮೇಷ್ಟ್ರು ಮರದ ಕೆಳಗೆ ಆರಂಭಿಸಿದಾಗ ಅದನ್ನು ಕಡಿದುರುಳಿಸಲು ಪ್ಲ್ಯಾನ್ ಮಾಡಲಾಗುತ್ತದೆ. ಆದರೆ, ಕೇರಿಯ ಜನರು ಹಾಗೂ ಮಕ್ಕಳು ಸೇರಿ ಪ್ಲ್ಯಾನ್ ಹಾಳು ಮಾಡುತ್ತಾರೆ.
ಇದೊಂದು ಕಾದಂಬರಿ ಆಧಾರಿತ ಅದ್ಬುತ ಚಿತ್ರ. ಖ್ಯಾತ ಕಥೆಗಾರ ಕುಂ. ವೀರಭದ್ರಪ್ಪ ಅವರ ಕಾದಂಬರಿಯಿಂದ ಮೂಲ ಕಥೆಯನ್ನು ತೆಗೆದುಕೊಳ್ಳಲಾಗಿದೆ. ಜೂನ್ 30ರೊಳಗೆ ಚಿತ್ರ ಸೆನ್ಸಾರ್‌ಗೆ ಹೋಗಲಿದೆ. ಪನೋರಮಾ ಅವಾರ್ಡ್ ತೆಗೆದುಕೊಳ್ಳಬೇಕೆಂಬ ಮಹದಾಸೆಯನ್ನು ಇಡೀ ಚಿತ್ರ ತಂಡ ಹೊಂದಿದೆ. ತಮ್ಮ ಪುತ್ರಿ ತೇಜಸ್ವಿನಿ ಪ್ರಧಾನ ಪಾತ್ರ (ನಾಗವ್ವ) ಮಾಡುತ್ತಿದ್ದಾರೆ. ಅವರ ಅತ್ತೆಯಾಗಿ ವಿಜಾಪುರದ ಆಶಾ ನಟಿಸುತ್ತಿದ್ದಾರೆ. ಅಚ್ಯುತ ಕುಮಾರ ಮೇಷ್ಟ್ರ ಪಾತ್ರ ಮಾಡುತ್ತಿದ್ದಾರೆ ಎಂದರು.
ದೇಸಿ ಸಂಸ್ಕ್ಕತಿಯ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಹಂಸಲೇಖ ಇಮೇಜಸ್ ಪ್ರೈ.ಲಿ. ಹೊಂದಿದೆ. ಮುಂಬರುವ ದಿನಗಳಲ್ಲಿ 5 ಚಿತ್ರಗಳನ್ನು ನಿರ್ಮಾಣ ಮಾಡಲಾಗುವುದು. ಡಿಸೆಂಬರ್ ಹೊತ್ತಿಗೆ 'ಲಾಹಿರಿ' ಎಂಬ ಜನಪದ ಸಾಹಿತ್ಯ ಕುರಿತ ಚಿತ್ರವನ್ನು ನಿರ್ಮಾಣ ಮಾಡಲಾಗುವುದು. 10 ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಮಕ್ಕಳನ್ನು ಕಾಲೇಜಿಗೆ ಸೇರಿಸಿಕೊಳ್ಳಲಾಗುವುದು. 8ನೇ ತರಗತಿಯಿಂದ ಕಲೆ ಮತ್ತು ಶಿಕ್ಷಣ ಕುರಿತ ಶಾಲೆಯನ್ನು ತೆರೆಯಲಾಗಿದೆ. ಈ ಶಾಲೆಗೆ ಬುಡಕಟ್ಟು ಜನಾಂಗಕ್ಕೆ ಸೇರಿದ ಮಕ್ಕಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಿಕೊಳ್ಳಲಾಗುವುದು. ಈಗಾಗಲೇ ಹಂಸಲೇಖ ಇಮೇಜಸ್‌ನ ನಿರ್ದೇಶಕ ಅಲಂಕಾರ್ ಎಲ್ಲ ಯೋಜನೆ ಹಾಕಿಕೊಂಡಿದ್ದಾರೆ ಎಂದು ಹಂಸಲೇಖ ತಿಳಿಸಿದರು.