ನಟ ಸಚಿನ್ ಸುವರ್ಣರ ಅತ್ಯಂತ ಮಹತ್ವಾಕಾಂಕ್ಷೆಯ ಹಾಗೂ ನಿರ್ದೇಶಕ ಕೇಶವ್ ಶೆಟ್ಟಿ ಅವರ ಬಹು ನಿರೀಕ್ಷೆಯ ಚಿತ್ರ 'ಶ್ರೀಮೋಕ್ಷ'. ಅದಕ್ಕೆ ಈ ವಾರ ಬಿಡುಗಡೆ ಭಾಗ್ಯ ದೊರೆಯುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಕಳೆದ ವಾರವೇ ಚಿತ್ರ ಬಿಡುಗಡೆ ಆಗಲಿದೆ ಎಂಬ ಮಾತು ಕೇಳಿ ಬಂದಿತ್ತು. ಆದರೆ ಕೈಟ್ಸ್ ಪ್ರಭಾವಕ್ಕೆ ಮಂಕಾಗಬಾರದು ಹಾಗೂ ಉತ್ತಮ ಚಿತ್ರಮಂದಿರಲ್ಲೇ ಸಿನಿಮಾ ಬಿಡುಗಡೆ ಆಗಬೇಕೆಂದು ಕಾದಿದ್ದರಿಂದ ಕೊಂಚ ವಿಳಂಬವಾಗಿ ಚಿತ್ರ ಹೊರ ಬರುತ್ತಿದೆ. ಶ್ರೀ ಮತ್ತು ಮೋಕ್ಷ ಎಂಬ ಎರಡು ರೀತಿಯ ವ್ಯಾಖ್ಯಾನ ಒಳಗೊಂಡಿರುವ ಈ ಚಿತ್ರ ಹುಟ್ಟಿನಿಂದ ಸಾವಿನವರೆಗಿನ ಕಥೆಯನ್ನು ಹಾಗೂ ಚಿತ್ರಣವನ್ನು ಆಧರಿಸಿದೆ. ಈ ಚಿತ್ರದ ಮೂಲಕ ಇದೇ ಮೊದಲ ಬಾರಿಗೆ ಮಂಗಳೂರು ಅಥವಾ ಕರಾವಳಿಯ ಭೂಗತ ಜಗತ್ತಿನ ರೋಚಕ ಘಟನೆಯನ್ನು ಇಲ್ಲಿ ಅನಾವರಣಗೊಳಿಸಲಾಗಿದೆ.
ಕರಾವಳಿಯ ಮೀನುಗಾರ ಹುಡುಗನೊಬ್ಬ ಭೂಗತ ಜಗತ್ತನ್ನು ಸೇರಿ ಹೇಗೆ ಮುಂದಿನ ಹಲವು ಬೆಳವಣಿಗೆಗೆ ಕಾರಣನಾಗುತ್ತಾನೆ ಎಂಬುದು ಚಿತ್ರದ ತಿರುಳು. ಒಟ್ಟಾರೆ ಚಿತ್ರದ ಮೂಲಕ ಜನರಿಗೆ ಭರಪೂರ ಮನರಂಜನೆ ನೀಡುವುದು ಚಿತ್ರ ನಿರ್ಮಾಪಕರ ಉದ್ದೇಶ. ಚಿತ್ರದ ಬಗ್ಗೆ ನಾಯಕ ಸಚಿನ್ ಅಪಾರ ಭರವಸೆ ಇರಿಸಿಕೊಂಡಿದ್ದಾರೆ. ಇದಲ್ಲದೇ 'ಎನ್ ಕೌಂಟರ್ ದಯಾನಾಯಕ್' ಚಿತ್ರದಲ್ಲಿ ಅಭಿನಯಿಸಿದ್ದ ಸಚಿನ್ ಆ ಚಿತ್ರದಲ್ಲಿ ಅಭಿನಯಿಸಿದ್ದ ಪಾತ್ರಕ್ಕೆ ವಿರುದ್ಧವಾದ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ಒಟ್ಟು ಎರಡು ಗೆಟಪ್‌ನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರನ್ನು ರಂಜಿಸಲಿದ್ದಾರೆ.
ಈ ಚಿತ್ರದಲ್ಲೂ ಸಚಿನ್ ಕೈಲಿ ಶಸ್ತ್ರಾಸ್ತ್ರಗಳಿವೆ. ಆದರೆ ರಕ್ತಪಾತ ಸನ್ನಿವೇಶಗಳು ಇರುವುದು ತೀರಾ ಕಡಿಮೆಯಂತೆ. ಮುಂಬೈ ಮೂಲದ ರಿತು ಈ ಚಿತ್ರದ ನಾಯಕಿ. ಉಳಿದಂತೆ ಆದಿಲೋಕೇಶ್, ಕರಿಬಸವಯ್ಯ ಜತೆ ಕೆಲ ರಂಗಭೂಮಿ ಕಲಾವಿದರೂ ಇದ್ದಾರೆ. ಒಂದು ಉತ್ತಮ ಹಾಗೂ ವಿಭಿನ್ನ ಚಿತ್ರ ಇದಾಗಿದ್ದು, ಜನ ಎಷ್ಟರ ಮಟ್ಟಿಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.