ರಿಚರ್ಡ್ ಕ್ಯಾಸ್ಟಲೀನೋ ಅವರ ಅದ್ದೂರಿ ಚಿತ್ರ 'ಎಲ್ಲೆಲ್ಲೂ ನೀನೆ ನನ್ನಲ್ಲೂ ನೀನೆ' ಬಿಡುಗಡೆಗೆ ಸಜ್ಜಾಗಿ ಕುಳಿತಿದೆ. ಚಿತ್ರದ ಚಿತ್ರೀಕರಣ, ಡಬ್ಬಿಂಗ್, ಹಾಡು ಚಿತ್ರೀಕರಣ ಎಲ್ಲವೂ ಮುಗಿಸಲಾಗಿದೆ. ಕಡಲ ತೀರದ ದೊಡ್ಡ ತಂಡವನ್ನೇ ಒಳಗೊಂಡಿರುವ ಈ ಚಿತ್ರ ತಂಡದಲ್ಲಿ ನಾಯಕ, ನಾಯಕಿ, ನಿರ್ಮಾಪಕ, ನಿರ್ದೇಶಕ ಸೇರಿದಂತೆ ಎಲ್ಲರೂ ಮಂಗಳೂರಿನವರೇ ಇದ್ದಾರೆ. ಚಿತ್ರದ ವಿಶೇಷಗಳಲ್ಲಿ ಇದೂ ಒಂದು.
ನಿರ್ಮಾಪಕ ಫ್ರಾಂಕ್ ಫೆರ್ನಾಂಡೀಸ್ ಈಗಾಗಲೇ ಕೊಂಕಣಿ ಭಾಷೆಯ ಚಿತ್ರವನ್ನು ನಿರ್ಮಿಸಿದ ಅನುಭವ ಹೊಂದಿದ್ದಾರೆ. ಕನ್ನಡದಲ್ಲೂ ಒಂದು ಚಿತ್ರ ಮಾಡಬೇಕೆಂಬ ಮಹದಾಸೆಯಿಂದ ಈ ಚಿತ್ರ ನಿರ್ಮಿಸಿದ್ದೇನೆ. ಕನ್ನಡದ ನೆಲ ತಮ್ಮನ್ನು ಪೋಷಿಸಲಿದೆ ಎನ್ನುತ್ತಾರೆ. ಹೊಡೆದಾಟ, ಅಣ್ಣ- ತಂಗಿ ಸೆಂಟಿಮೆಂಟ್, ಲವ್, ನಿರಾಸೆ ಮತ್ತಿತರ ವಿಷಯವನ್ನು ಈ ಚಿತ್ರ ಒಳಗೊಂಡಿದೆ. ಜನ ಈ ಚಿತ್ರವನ್ನು ನಿಜಕ್ಕೂ ಪ್ರೀತಿಯಿಂದ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸ ಚಿತ್ರ ತಂಡದ್ದು.
ನಿರ್ದೇಶಕ ರಿಚರ್ಡ್‌ಗೆ ಇದೇನು ಹೊಸ ಅನುಭವ ಅಲ್ಲ. ಸಾಕಷ್ಟು ಚಿರಪರಿಚಿತ ಹೆಸರು ಅವರದಾಗಿದ್ದು, ತುಳು, ಕೊಂಕಣಿ ಮೊದಲಾದ ಪ್ರಾದೇಶಿಕ ಭಾಷಾ ಚಲನಚಿತ್ರ ನಿರ್ದೇಶಿಸಿದ ಅನುಭವವಿದೆ.
ಕಮರ್ಷಿಯಲ್ ಚಿತ್ರ ಮಾಡುವಾಗ ಸ್ವಾತಂತ್ರ್ಯ ಹೆಚ್ಚಿರುತ್ತದೆ ಎನ್ನುವ ರಿಚರ್ಡ್‌ಗೆ ಇದು ಕನ್ನಡದ ಮೊದಲ ಚಿತ್ರ. ಸಾಕಷ್ಟು ಬೆಳೆಯುವ ಆಸೆ ಹೊತ್ತಿರುವ ಇವರಿಗೆ ಈ ಚಿತ್ರದ ಮೇಲೆ ಅಪಾರ ನಂಬಿಕೆ ಇದೆಯಂತೆ. ಕಷ್ಟಪಟ್ಟು ಕೆಲಸ ಮಾಡಿದ್ದೇನೆ ಅನ್ನುತ್ತಿದ್ದಾರೆ. ಬ್ಯಾಂಕಾಕ್, ಮಲೇಷ್ಯಾ ಹಾಗೂ ಸಿಂಗಪೂರ್‌ನಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. ಅಲ್ಲಿನ ರಮಣೀಯ ತಾಣದಲ್ಲಿ ಚಿತ್ರೀಕರಣ ನಡೆದಿದೆ.
ಚಿತ್ರದ ನಾಯಕಿ ಸುಪ್ರೀತಾ ವಿದೇಶದಿಂದ ಬಂದ ಆಧುನಿಕ ಮಹಿಳೆಯ ಪಾತ್ರದಲ್ಲಿ ಮಿಂಚಲಿದ್ದಾರೆ. ವಿದೇಶದಿಂದ ಬಂದು ಹಳ್ಳಿ ಜೀವನಕ್ಕೆ ಒಗ್ಗಿಕೊಳ್ಳುವ ಸರಳ ಪವ್ಯಕ್ತಿತ್ವ ಕೂಡಾ ಪಾತ್ರದ್ದು. ಚಿತ್ರದ ಚಿತ್ರೀಕರಣ, ಕೈಮುರಿದು ಕೊಂಡಾಗ ಇಡೀ ಚಿತ್ರ ತಂಡ ಒಟ್ಟಾಗಿ ತಮ್ಮ ಬೆಂಬಲಕ್ಕೆ ನಿಂತಿದ್ದು, ವಿದೇಶ ಪ್ರಯಾಣ ಎಲ್ಲವನ್ನೂ ಮೆಲುಕು ಹಾಕುತ್ತಾರೆ. ನೀನಾಸಂ ಅಶ್ವತ್ಥ್ ಚಿತ್ರದಲ್ಲಿ ನಾಯಕಿಯ ಅಣ್ಣನ ಪಾತ್ರ ಮಾಡಿದ್ದಾರೆ. ನಮೃತಾ ಎಂಬ ನಟಿ ಕಾಮಿಡಿ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರೋಹಿತ್ ಚಿತ್ರದ ನಾಯಕ. ಎಲ್ಲಾ ಸರಿಯಾಗಿ ಆದಲ್ಲಿ ಆಗಸ್ಟಿನಲ್ಲಿ ಚಿತ್ರ ತೆರೆಗೆ ಬರಬಹುದು.