ಹುಟ್ಟು ಹಬ್ಬ ಆಚರಿಸಿಕೊಂಡ ವಾರದೊಳಗೆ ರವಿಚಂದ್ರನ್ ತಮ್ಮ ಅಭಿಮಾನಿಗಳಿಗೆ 'ಹೂ' ಕೊಡುತ್ತಿದ್ದಾರೆ. ಹುಟ್ಟುಹಬ್ಬಕ್ಕೆ ಮುನ್ನವೇ ನೀಡಬೇಕಿದ್ದ ಹೂ ಕೊಂಚ ತಡವಾಗಿ ಕೈ ಸೇರಿದ್ದರಿಂದ ಒಂದು ವಾರ ತಡವಾಗಿದೆ. ಆದರೆ ಬಹು ದಿನದ ನಂತರ ಇವರು ನೀಡುತ್ತಿರುವ ಈ ಹೂ ನಿಜಕ್ಕೂ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ವಾರವೇ ಬಿಡುಗಡೆಯಾಗಬೇಕಿದ್ದ ಹೂ, ಸಮರ್ಪಕ ಚಿತ್ರಮಂದಿರ ಸಿಗದ ಕಾರಣ ತಡವಾಗಿ ಅಂದರೆ ಜೂ.4ರಂದು ಬಿಡುಗಡೆಯಾಗುತ್ತಿದೆ. ಕನಸುಗಾರನ ಒಂದು ಕನಸು ಆಗಿರುವ ಈ ಹೂ, 'ಸ್ನೇಹಕ್ಕೆ, ಪ್ರೇಮಕ್ಕೆ, ಹಬ್ಬಕ್ಕೆ' ಎಂಬ ಸಬ್ ಟೈಟಲ್ ಸಹ ಹೊಂದಿದೆ.
ಎಸ್.ಎಸ್. ಕಂಬೈನ್ಸ್ ಹೊರತರುತ್ತಿರುವ ಈ ಚಿತ್ರದ ವಿಶೇಷ ಆಕರ್ಷಣೆ ರವಿಚಂದ್ರನ್ರ ವಿಭಿನ್ನ ಸೆಟ್‌ಗಳು ಹಾಗೂ ಮಾದಕ ದಂತದ ಬೊಂಬೆ ನಮಿತಾ. ಹೌದು. ತೆಲುಗು ಹಾಗೂ ತಮಿಳು ಪಡ್ಡೆಗಳ ನಿದ್ದೆ ಕೆಡಿಸಿರುವ ಈ ಚೆಲುವೆ ಈ ಹಿಂದೆಯೂ ರವಿಮಾಮನ ಜೊತೆಗೆ ಅಭಿನಯಿಸಿದ ಅನುಭವವಿದೆ. ಈಗಾಗಲೇ ಸಾಕಷ್ಟು ಹೆಸರು ಮಾಡಿರುವ ಚಿತ್ರ ಬಿಡುಗಡೆ ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕು.
ಚಿತ್ರದಲ್ಲಿ ನಗೆಗೂ ಕೂಡಾ ಬರವಿಲ್ಲವಂತೆ. ಶರಣ್ ಹಾಗೂ ಬುಲೆಟ್ ಪ್ರಕಾಶ್ ಯಥೇಚ್ಛವಾಗಿ ನಗಿಸಲಿದ್ದಾರೆ. ರವಿಚಂದ್ರನ್ ಸಹ ಅತ್ಯುತ್ತಮ ಅಭಿನಯವನ್ನು ಈ ಚಿತ್ರದಲ್ಲಿ ನೀಡಿದ್ದಾರೆ ಎನ್ನಲಾಗುತ್ತಿದೆ. ಎಲ್ಲವೂ ಬಿಡುಗಡೆ ನಂತರ ನೋಡಬೇಕು ಅಷ್ಟೆ.