ಡಾ. ವಿಷ್ಣುವರ್ಧನ್ ಇಂದು ನಮ್ಮೊಂದಿಗೆ ಇಲ್ಲ. ಆದರೆ ಅವರ 200ನೇ ಚಿತ್ರ ಆಪ್ತರಕ್ಷಕ ಹಲವು ಮಂದಿರಗಳಲ್ಲಿ ಓಡುವ ಮೂಲಕ ಅವರ ನೆನಪಾಗಿ ಉಳಿದಿದೆ. ಹೌದು ಆಪ್ತ ರಕ್ಷಕ ಈಗ 100 ದಿನ ಪೂರೈಸಿದೆ.
ಡಾ. ವಿಷ್ಣು ಮೂರು ವಿಭಿನ್ನ ಪಾತ್ರದಲ್ಲಿ ನಟಿಸಿರುವ ಈ ಚಿತ್ರ ಮಕ್ಕಳು, ಮಹಿಳೆಯರು ಹಾಗೂ ಹಿರಿಯ ನಾಗರಿಕರನ್ನು ಅಪಾರವಾಗಿ ಸೆಳೆದಿದೆ. ಸಾಕಷ್ಟು ಸಂಖ್ಯೆಯಲ್ಲಿ ಜನ ಇಂದು ಚಿತ್ರ ಮಂದಿಕ್ಕೆ ಬರುತ್ತಲೇ ಇದ್ದಾರೆ. ಚಿತ್ರ ಮೊನ್ನೆ ಮೊನ್ನೆ ಬಿಡುಗಡೆ ಆದಂತೆ ಅನ್ನಿಸಿದರೂ, ಈಗಾಗಲೇ ಶತದಿನ ಪೂರೈಸಿ ಬಿಟ್ಟಿದೆ.
ಕನ್ನಡ ಚಿತ್ರಗಳು ಸೋಲುತ್ತಿವೆ ಎಂಬ ಮಾತಿಗೆ ಆಪ್ತರಕ್ಷಕ ಅಪವಾದವಾಗಿ ಗೋಚರಿಸುತ್ತಿದೆ. ಕನ್ನಡದಲ್ಲೂ ಉತ್ತಮ ಚಿತ್ರ ಮಾಡಿದರೆ ಓಡುತ್ತದೆ ಎನ್ನುವುದಕ್ಕೆ ಇದೇ ಸಾಕ್ಷಿ. ಉದಯರವಿ ಫಿಲಂಸ್‌ನ ಕೃಷ್ಣಪ್ರಜ್ವಲ್ ನಿರ್ಮಿಸಿರುವ ಈ ಚಿತ್ರಕ್ಕೆ ಪಿ. ವಾಸು ನಿರ್ದೇಶಕರು. ಉತ್ತಮ ಹಿನ್ನೆಲೆ ಸಂಗೀತ, ಸಾಹಸ, ಸಂಕಲನ ಲಭಿಸಿದ್ದು, ಚಿತ್ರದ ಬಹುಪಾಲು ಯಶಸ್ಸಿಗೆ ಕಾರಣವೂ ಆಗಿದೆ.
ಚಿತ್ರದಲ್ಲಿ ವಿಷ್ಣು ಅಭಿನಯದ ಬಗ್ಗೆ ಎರಡು ಮಾತಿಲ್ಲ. ಅವರಿಂದಲೇ ಚಿತ್ರ ಗೆದ್ದಿದೆ ಎನ್ನುವಲ್ಲಿಯೂ ಯಾವುದೇ ಅಳುಕಿಲ್ಲ. ಉತ್ತಮ ಚಿತ್ರ ಮಾಡಿದರೆ ಜನ ನೋಡುತ್ತಾರೆ ಅನ್ನುವುದಕ್ಕೆ ಆಪ್ತ ರಕ್ಷಕ, ನಾನು ನನ್ನ ಕನಸು, ರಾಮ್, ಪ್ರಥ್ವಿ ಮತ್ತಿತರ ಚಿತ್ರಗಳು ಸಾಕ್ಷಿ. ಉತ್ತಮವಾಗಿ ಓಡುತ್ತಿರುವ ಈ ಚಿತ್ರಗಳಲ್ಲಿ ಸಾಕಷ್ಟು ಪೈಪೋಟಿ ಇದೆ. ಕನ್ನಡದ ಸಾಕಷ್ಟು ಚಿತ್ರಗಳು ಈ ಹಿಂದೆ ಸೋತಿರಬಹುದು. ಆದರೆ ಇವು ಗೆಲ್ಲುವ ಮೂಲಕ ಕನ್ನಡ ಚಿತ್ರರಂಗದ ಗೌರವ ಉಳಿಸಿವೆ. ಮನಸೋ ಇಚ್ಛೆ ಹಣ ಚೆಲ್ಲಿ ಯಡಬಿಡಂಗಿ ಚಿತ್ರ ನಿರ್ಮಿಸುವವರು, ಚಿತ್ರ ನಿರ್ಮಾಣಕ್ಕೆ ಕೈ ಹಾಕುವ ಮುನ್ನ ಇಂಥ ಚಿತ್ರವನ್ನು ಒಮ್ಮೆ ನೋಡುವುದು ಒಳಿತು.